ಮಂಗಳೂರು, ಆ 3 (DaijiworldNews/HR): ಯನೈಟೆಡ್ ಕಿಂಗ್ಡಂನಿಂದ(UK) ಉಡುಗೊರೆ ಕಳುಹಿಸುವುದಾಗಿ ಹೇಳಿ ಸುಮಾರು 5.90 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಟ್ಸ್ಆ್ಯಪ್ ಮೂಲಕ ಜುಲೈ 22ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ಡಾ. ಫ್ರಾಕ್ಲಿನ್ ಪ್ಯಾಟ್ರಿಕ್ ಎಂದು ಪರಿಚಯಿಸಿಕೊಂಡು ಯುನೈಟೆಡ್ ಕಿಂಗ್ಡಮ್ನಲ್ಲಿ ವೈದ್ಯನಾಗಿದ್ದೇನೆ ಎಂದು ಹೇಳಿಕೊಂಡಿದ್ದು, ಕೆಲವು ದಿನಗಳ ಬಳಿಕ ಆತ ತನ್ನ ಮಗಳ ಬರ್ತ್ಡೇಗೆ ವಿದೇಶಿ ಕರೆನ್ಸಿ, ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ತಿಳಿಸಿದ್ದ.
ಇನ್ನು ಜು.24ರಂದು ಇನ್ನೋರ್ವ ಅಪರಿಚಿತ ವ್ಯಕ್ತಿಯು ತನಗೆ ಕರೆ ಮಾಡಿ ನಿಮಗೆ ಪಾರ್ಸೆಲ್ ಬಂದಿದ್ದು, ದಿಲ್ಲಿಗೆ ತಲುಪಿದೆ. ಅದರ ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕು ಎಂದಿದ್ದ. ಅದನ್ನು ನಂಬಿದ ನಾನು ತನ್ನ ಖಾತೆಯಿಂದ 40,000 ರೂ.ಗಳನ್ನು ಪ್ರೊಸೆಸಿಂಗ್ ಶುಲ್ಕವೆಂದು ಗೂಗಲ್ಪೇ ಮಾಡಿದ್ದೆ.
ಅಪರಿಚಿತ ವ್ಯಕ್ತಿ ಕರೆ ಮಾಡಿ ವಿವಿಧ ಕಾರಣ ನೀಡಿ ಜು.31ರವರೆಗೆ ಹಂತ ಹಂತವಾಗಿ 5.90 ಲಕ್ಷ ರೂ.ವನ್ನು ಪಡೆದು ವಂಚಿಸಿದ್ದಾನೆ ಎಂದು ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ.