ಕುಂದಾಪುರ,ಆ 02 (DaijiworldNews/AK):ನಿನ್ನೆ ರಾತ್ರಿ ಬಿರುಗಾಳಿ ಸಮೇತ ಮಳೆ ಸುರಿದ ಪರಿಣಾಮ ಉಳ್ಳೂರು ಬಳಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಏಳು ಮನೆಗಳಿಗೆ ಹಾನಿ ಉಂಟಾಗಿದ್ದು, ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಅಡಿಕೆ ಹಾಗೂ ತೆಂಗಿನ ಮರಗಳು ಧರೆಗುರುಳಿದೆ ಎಂದು ತಿಳಿದು ಬಂದಿದೆ.
ಗಾಳಿಯಿಂದ ಜಯಕರ ಶೆಟ್ಟಿ ಅವರ ಮನೆಗೆ ಹಾನಿಯಾಗಿದ್ದು 2 ಲಕ್ಷ ನಷ್ಟವಾಗಿದೆ. ಇನ್ನು ಪಾರ್ವತಿ ಶೆಡ್ತಿಯವರ ಮನೆಗೆ ಹಾನಿಯಾಗಿದ್ದು, 25 ಸಾವಿರ ದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸುಮತಿ ಶೆಡ್ತಿಯವರ ಮನೆ 50 ಸಾವಿರ ರೂಪಾಯಿ ನಷ್ಟವಾಗಿದ್ದು, ರತ್ನಾಕರ ಶೆಟ್ಟಿಯವರ ಮನೆಗೆ ಹಾನಿಯಾಗಿದ್ದು 20 ಸಾವಿರ ಎಂದು ಅಂದಾಜಿಸಲಾಗಿದೆ. ನೀಲು ಪೂಜಾರ್ತಿಯವರ ಮನೆಗೆ 25 ಸಾವಿರ ನಷ್ಟ, ಗಿರಿಜಾ ಪೂಜಾರ್ತಿಯವರ ಮನೆಗೆ 20 ಸಾವಿರ ರೂ ನಷ್ಟವಾಗಿದೆ. ಅಣ್ಣಪ್ಪ ಪೂಜಾರಿಯವರ ಮನೆಗೆ ಸುಮಾರು 25 ಸಾವಿರದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಕೃಷಿ ತೋಟದಲ್ಲಿನ ಫಸಲು ಭರಿತ ಅಡಿಕೆ- ತೆಂಗು ಮರಗಳು ನೆಲಕಚ್ಚಿದ್ದು, ಅಪಾರ ನಷ್ಟ ಸಂಭವಿಸಿದೆ. ಸುಧಾಕರ ಶೆಟ್ಟಿ ಅವರ 225 ಅಡಿಕೆ ಮರ, ಶಂಕರ ಶೆಟ್ಟಿಯವರ 150, ಮಹಾಬಲ ನಾಯ್ಕರ 40, ಉದಯ ಪೂಜಾರಿಯವರ ತೋಟದ 15 ಮರ, ವನಜ ಆಚಾರ್ತಿಯವರ 35, ರತ್ನ ಆಚಾರಿ 75, ಲಕ್ಷ್ಮೀನಾರಾಯಣ ಆಚಾರಿ 25, ಕೃಷ್ಣ ಆಚಾರಿಯವರ 20, ಪಾರ್ವತಿ ಶೆಟ್ಟಿ 25, ಸಂಪಿಗೇಡಿ ನಾರಾಯಣ ಶೆಟ್ಟಿ 125 ಅಡಿಕೆ ಹಾಗೂ 4 ತೆಂಗಿನ ಮರ, ಸುಮತಿ ಶೆಡ್ತಿಯವರ 200 ಅಡಿಕೆ ಮರ, ರತ್ನಾಕರ ಶೆಟ್ಟಿಯವರ 200 ಅಡಿಕೆ, ದಿವಾಕರ ಶೆಟ್ಟಿ 220 ಮರ ಹಾಗೂ ಕಲಾವತಿ ಶೆಟ್ಟಿಯವರ 250 ಅಡಿಕೆ ಮರಗಳು ಗಾಳಿಗೆ ಮುರಿದು ಬಿದ್ದಿವೆ. ಸುಮಾರು 1600ಕ್ಕೂ ಅಧಿಕ ಅಡಿಕೆ ಮರ ಹಾಗೂ ನಾಲ್ಕು ತೆಂಗಿನ ಮರಗಳು ಧರೆಗುರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಕುಂದಾಪುರ ತಹಸೀಲ್ದಾರ್ ಶೋಭಾ ಲಕ್ಷ್ಮಿ, ಕಂದಾಯ ನಿರೀಕ್ಷಕ ರಾಘವೇಂದ್ರ ಡಿ., ಉಳ್ಳೂರು ಗ್ರಾಮ ಕರಣಿಕ ಕಿರಣ್. ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಹೆಬ್ಬಾರ್ , ಪಿಡಿಒ ಶ್ರೀಧರ್ ಕಾಮತ್. ಪಂಚಾಯತ್ ಸದಸ್ಯರುಗಳು, ಮುಖಂಡರಾದ ಸಂಜೀವ ಶೆಟ್ಟಿ ಸಂಪಿಗೇಡಿ, ರೋಹಿತ್ ಶೆಟ್ಟಿ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಭೇಟಿ ನೀಡಿ ಪರಿಶೀಲಿಸಿದ ಬಳಿಕ ಹಾನಿಗೊಳಗಾದ ಮನೆ ಹಾಗೂ ಅಡಿಕೆ ತೋಟಕ್ಕೆ ತಕ್ಷಣ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.