ಮಂಗಳೂರು, ಆ 02 (DaijiworldNews/HR): "ಸಾಧ್ಯವಾದಷ್ಟು ಭಾಷಾ ಬಳಕೆ ಮತ್ತು ನಿರೂಪಣೆಯಲ್ಲಿ ಶುದ್ದತೆಯನ್ನು ಕಾಪಡಿಕೊಂಡು ಬರುವುದರ ಜತೆಗೆ ಪ್ರತಿ ಕಥೆಯಲ್ಲಿ ಸಾಮಾಜಿಕ ಸಮಸ್ಯೆಯನ್ನು ಬಿಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತೇನೆ" ಎಂದು ಹಿರಿಯ ಕಥೆಗಾರ ಡಾಲ್ಪಿ ಕಾಸ್ಸಿಯಾ ಹೇಳಿದ್ದಾರೆ.
ಮಂಗಳೂರಿನ ಕೊಡಿಯಾಲ್ಬೈಲ್ ಬಿಷಪ್ಪರ ನಿವಾಸದಲ್ಲಿ ರಾಕ್ಣೊ ವಾರಪತ್ರಿಕೆಯ ಆಶ್ರಯದಲ್ಲಿ, ಸಾಹಿತ್ಯ ಅಕಾಡೆಮಿ ದೆಹಲಿ ಆಯೋಜಿಸಿದ ಕಥಾಸಂಧಿ ಕಾರ್ಯಕ್ರಮದಲ್ಲಿ ತಮ್ಮ ಆಯ್ದ ಕಥೆ ’ಮಾಂಯ್ ಕಿತ್ಯಾಕ್ ರಡ್ತಾ?’ (ಅಮ್ಮ ಯಾಕೆ ಅಳುತ್ತಾರೆ?) ಪ್ರಸ್ತುತ ಪಡಿಸಿ, ಕಥನ ಕಲೆಯ ಬಗ್ಗೆ ಮಾತನಾಡಿದ ಅವರು, ಸಾಹಿತ್ಯ ಅಕಾಡೆಮಿ, ದೆಹಲಿ, ಕೊಂಕಣಿ ಭಾಷಾ ಸಲಹಾ ಮಂಡಳಿಯ ಸದಸ್ಯ, ಪತ್ರಕರ್ತ ಎಚ್ಚೆಮ್, ಪೆರ್ನಾಲ್ ಸಾಹಿತ್ಯ ಅಕಾಡೆಮಿಯ ವಿವಿಧ ಯೋಜನೆಗಳ ಬಗ್ಗೆ ವಿಸ್ತ್ರತ ಪರಿಚಯ ನೀಡಿ, ಕೊಂಕಣಿ ಭಾಷಿಕರು ಪ್ರತ್ಯೇಕವಾಗಿ ಸಾಹಿತಿ ಮತ್ತು ಬರಹಗಾರರು ಸಾಹಿತ್ಯ ಅಕಾಡೆಮಿಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದರು.
ಸಾಹಿತ್ಯ ಅಕಾಡೆಮಿ, ದೆಹಲಿ ಜನರಲ್ ಕಾವ್ನ್ಸಿಲ್ ಸದಸ್ಯರೂ, ಕೊಂಕಣಿ ಭಾಷಾ ಮುಖ್ಯಸ್ಥರೂ ಆಗಿರುವ ಕವಿ ಮೆಲ್ವಿನ್ ರಾಡ್ರಿಗಸ್ ಕಥಾಕಾರರನ್ನು ವೆದಿಕೆಗೆ ಬರಮಾಡಿಕೊಂಡು ಹೂ ಗುಚ್ಛ ನೀಡಿ ಸ್ವಾಗತಿಸಿದರು.
ಕಥಾ ಪ್ರಸ್ತುತಿಯ ಬಳಿಕ ಕಥೆ, ಕಥಾಹಂದರ, ಆರಂಭ, ಅಂತ್ಯ ಮತ್ತು ತಿರುವುಗಳ ಬಗ್ಗೆ ಡಾಲ್ಫಿ ಕಾಸ್ಸಿಯಾ ಬೆಳಕು ಚೆಲ್ಲಿದರು. ರಾಕ್ಣೊ ಸಂಪಾದಕ ವಂ| ರೂಪೇಶ್ ಅಶೋಕ್ ಮಾಡ್ತಾ ಸಂವಾದವನ್ನು ನಡೆಸಿಕೊಟ್ಟು, ವಂದಿಸಿದರು. ಸಾಹಿತ್ಯ ಅಕಾಡೆಮಿ, ದೆಹಲಿ ಕೊಂಕಣಿ ಭಾಷಾ ಸಲಹಾ ಸಮಿತಿಯ ಸದಸ್ಯ ಸ್ಟ್ಯಾನಿ ಬೇಳಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.