ಕಾರ್ಕಳ, ಆ 02 (DaijiworldNews/HR): ನೈತಿಕ ಪೊಲೀಸ್ ಗಿರಿ ನಡೆಸಿದ ಐವರು ಸಂಘಟನೆಯೊಂದರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಮಂಗಳೂರಿನ ಹೆಸರಾಂತ ಕಾಲೇಜುವೊಂದರ ನಾಲ್ವರು ವೈದ್ಯರು ಹಾಗೂ ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಅವರು ರವಿವಾರದಂದು ಒಂದೇ ಕಾರಿನಲ್ಲಿ ಮಂಗಳೂರಿನಿಂದ ಶೃಂಗೇರಿಗೆ ತೆರಳಿ ಸಂಜೆ 4.30ರ ವೇಳೆಗೆ ಕಾರ್ಕಳದ ಕುಂಟಲ್ಪಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದರು. ಮಾಳ ಎಸ್ ಕೆ ಬಾರ್ಡರ್ ಬಳಿಯಿಂದ ಇವರ ಕಾರನ್ನು ಹಿಂಬಾಲಿಸಿ ಬಂದ ಮತ್ತೊಂದು ಕಾರು ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಒಂದೇ ಕಾರಿನಲ್ಲಿ ವಿಭಿನ್ನ ಕೋಮಿಗೆ ಸೇರಿದವರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದನೆಗೈದು ಬೆದರಿಕೆಯೊಡ್ಡಿದ್ದರು.
ಇನ್ನು ಪ್ರಯಾಣಿಕರ ಕಾರಿನಲ್ಲಿ ಇದ್ದ ಸುಮಾರು 36,38 ವರ್ಷ ಪ್ರಾಯದ ಮಹಿಳೆಯರು ನೇರವಾಗಿ 112ಗೆ ಕರೆ ಮಾಡಿ ಘಟನೆಯ ಕುರಿತು ಮಾಹಿತಿ ನೀಡಿದ ಮೇರೆಗೆ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅರವಿಂದ ಕಲ್ಲಗುಜ್ಜೆ, ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್ , ನಗರ ಠಾಣಾಧಿಕಾರಿ ಸಂದೀಪ್ ಶೆಟ್ಟಿ, ಗ್ರಾಮಾಂತರ ಠಾಣಾಧಿಕಾರಿ ದಿಲೀಪ್ ತೆರಳಿ ನೈತಿಕ ಪೊಲೀಸ್ ಗಿರಿ ತೋರ್ಪಡಿಸಿದ ಐವರು ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಸಂತೋಷ್ ನಂದಳಿಕೆ,ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಜಿತ್ ತೆಳ್ಳಾರು ಎಂಬವರನು ಬಂಧಿಸಿದ್ದಾರೆ.
ಸ್ಥಳದಲ್ಲಿ ಬಿಗುವಾತಾವರಣ ಇದ್ದುದರಿಂದ ಕಾರ್ಕಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಜಾಮೀನು ಮೇರೆಗೆ ಬಿಡುಗಡೆಗೊಳಿಸಲಾಗಿದೆ.