ಉಡುಪಿ, ಅ 1(DaijiworldNews/AK):ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರದ ಕುರಿತಾಗಿ ಕ್ರಮ ವಹಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ಮುಖ್ಯಮಂತ್ರಿಯಾದ ಬಳಿಕ ಉಡುಪಿಗೆ ಮೊದಲ ಬಾರಿ ಪ್ರಗತಿ ಪರಿಶೀಲನೆಗಾಗಿ ಭೇಟಿ ನೀಡಿದ್ದಾರೆ. ಈ ವೇಳೆ ಪಡುಬಿದ್ರಿಯ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ ಸಿಎಂ , ಜಿಲ್ಲೆಯಲ್ಲಿ ಮಳೆ, ಚಂಡಮಾರುತದ ಪ್ರಭಾವದಿಂದ ಅಪಾರ ಹಾನಿ ಉಂಟಾಗಿದೆ.ಉಡುಪಿ ಜಿಲ್ಲೆ 98 ಕಿ.ಮೀ ಸಮುದ್ರ ತೀರವನ್ನು ಪಡೆದುಕೊಂಡಿದೆ.ಆಗಾಗ್ಗೆ ಕಡಲ್ಕೊರೆತ ಆಗುತ್ತಿದ್ದು,. ಕೆಲವೆಡೆ ಶಾಶ್ವತ ಪರಿಹಾರ ಆಗಿದೆ. ಆದರೆ ಇನ್ನು ಕೆಲವು ಕಡೆ ಶಾಶ್ವತ ಪರಿಹಾರವಾಗಿಲ್ಲ.ಮಳೆ ಬಂದಾಗ ಅಲೆ ಎದ್ದಾಗ ಸಮುದ್ರದಲ್ಲಿ ಕಡಲ್ಕೊರೆತ ನಡೆಯುತ್ತಲೇ ಇರುತ್ತದೆ.ಇದಕ್ಕಾಗಿ ಶಾಶ್ವತ ಪರಿಹಾರದ ಕುರಿತಾಗಿ ಕ್ರಮ ವಹಿಸಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಉಡುಪಿಯಲ್ಲಿ ಸುಮಾರು 35 ಕೋಟಿ ರೂಪಾಯಿಯಷ್ಟು ಮಳೆಯಿಂದ ಹಾನಿ ಉಂಟಾಗಿದೆ ಎಂದು ಜಿಲ್ಲೆಯ ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು. ಇದಕ್ಕೆ ಹೆಚ್ಚುವರಿ ದುಡ್ಡು ಬೇಕಾದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಳಿಕ ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಅವರು ತಮ್ಮ ತಾಯಂದಿರನ್ನು ಗೃಹಲಕ್ಷ್ಮಿ ಯೋಜನೆಗೆ ದಾಖಲಿಸಲು ಮತ್ತು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಯುವನಿಧಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಇದೇ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳು ಮಂಜೂರಾದ ಉಚಿತ ಲ್ಯಾಪ್ಟಾಪ್ಗಳನ್ನು ಶೀಘ್ರವಾಗಿ ನೀಡುವಂತೆ ಕೇಳಿಕೊಂಡರು.
ನೋಟಿಸ್ ಬೋರ್ಡ್ನಲ್ಲಿ ಹಾಕಲಾಗಿದ್ದ ಹಾಸ್ಟೆಲ್ ಸಂಸತ್ತಿನ ವಿವರಗಳನ್ನು ನೋಡಿದ ಸಿಎಂ ಸಿದ್ದರಾಮಯ್ಯ ಹಗುರವಾದ ಟಿಪ್ಪಣಿಯಲ್ಲಿ “ನಿಮ್ಮಲ್ಲಿ ವಿರೋಧ ಪಕ್ಷದ ನಾಯಕ ಯಾರು?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಜಿಹಾದಿ ಸರ್ಕಾರ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಕಟೀಲ್ ಒಬ್ಬ ವಿಧೂಷಕ. ನಾನು ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.
ಈ ಸಂಧರ್ಭದಲ್ಲಿ ಸಚಿವರಾದ ಮಂಕಾಳ ವೈದ್ಯ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಶಾಸಕರಾದ ಗುರ್ಮೆ ಸುರೆಶ್ ಶೆಟ್ಟಿ, ಮುಖಂಡರಾದ ವಿನಯ್ ಕುಮಾರ್ ಸೊರಕೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು