ಮಂಗಳೂರು, ಜು 31 (DaijiworldNews/HR): ಸರಕಾರದ ನಿಯಮಗಳ ಪ್ರಕಾರ ಪ್ರತಿ ವರ್ಷ ಜೂ. 1 ರಿಂದ ಜು. ಅಂತ್ಯದವರೆಗೂ ಆಳ ಸಮುದ್ರ ಮೀನುಗಾರಿಕೆಯ ಮೇಲೆ ನಿರ್ಬಂಧ ಇರುತ್ತದೆ. ಮೀನುಗಳ ಸಂತಾನೋತ್ಪತ್ತಿ ದೃಷ್ಟಿಯಿಂದ ಹಾಗೂ ಮಳೆಗಾಲದ ಮೀನುಗಾರಿಕೆ ಅಪಾಯಕಾರಿ ಆಗಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಎರಡು ತಿಂಗಳುಗಳ ಕಾಲ ನಿಷೇಧ ಹೇರಲಾಗುತ್ತದೆ. ಅದರೆ ಇದೀಗ ನಿಷೇಧದ ಅವಧಿ ಮುಕ್ತಾಯಗೊಂಡಿದ್ದು ಆ. 1ರಿಂದ ಮೀನುಗಾರಿಕೆ ವರ್ಷದ ಮೀನುಗಾರಿಕೆ ಆರಂಭವಾಗಿದೆ.
ಹಿಂದಿನ ವರ್ಷದ ಮೀನುಗಾರಿಕೆ ಋತು ಮುಗಿಸಿ ವಿಶ್ರಾಂತಿಯಲ್ಲಿದ್ದ ಮೀನುಗಾರರು ಕಳೆದ 2 ವಾರಗಳಿಂದ ಬೋಟು ಮತ್ತು ಬಲೆ ದುರಸ್ತಿ ಹಾಗೂ ಇತರ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಮಳೆಗಾಲದ 61 ದಿನಗಳ ಆಳ ಸಮುದ್ರ ಮೀನುಗಾರಿಕೆ ನಿಷೇಧದ ಅವಧಿ ಜು. 31ಕ್ಕೆ ಕೊನೆಗೊಂಡಿದ್ದು, ಇಂದು ಮೀನುಗಾರಿಕೆ ಸೀಸನ್ ಆರಂಭವಾಗಿದ್ದರಿಂದ ಟ್ರಾಲ್ ಬೋಟ್ ಮೀನುಗಾರರು ಮುಂಜಾನೆ ವೇಳೆಯೇ ತಮ್ಮ ಬೋಟುಗಳೊಂದಿಗೆ ಕಡಲಿಗೆ ಇಳಿದಿದ್ದಾರೆ.
ರಾಜ್ಯದ ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಥರಾವರಿ ತಾಜಾ ಸಮುದ್ರ ಮೀನುಗಳ ಪೂರೈಕೆ ಆರಂಭವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,676, ಉಡುಪಿ ಜಿಲ್ಲೆಯಲ್ಲಿ 2,222 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 1,139 ಬೋಟುಗಳು ಸೇರಿದಂತೆ ಒಟ್ಟು 5037 ಯಾಂತ್ರೀಕೃತ ಬೋಟುಗಳಿವೆ. 11,061 ಮೋಟಾರೀಕೃತ ದೋಣಿಗಳು ಇವೆ. ಮಳೆ ಬಿಡುವು ನೀಡಿರುವುದರಿಂದ ಮೀನುಗಾರರು ಉತ್ತಮ ಮತ್ಸ್ಯ ಬೇಟೆಯ ನಿರೀಕ್ಷೆಯಲ್ಲಿದ್ದಾರೆ.
ಟ್ರಾಲ್ ಬೋಟ್ ಮೀನುಗಾರಿಕೆ ಮಾತ್ರ ಇಂದು ಆರಂಭವಾಗಿದ್ದು, ಪರ್ಸಿನ್ ಮೀನುಗಾರಿಕೆ ಆ. 4 ರ ಬಳಿಕ ಆರಂಭವಾಗಲಿದೆ.