ಮಂಗಳೂರು, ಏ 04(SM): ಮಂಗಳೂರು ನಗರದ ಕಾವೂರು ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗಾಲ್ಪ್ ಕ್ಲಬ್ ಬಳಿ ಕಾರ್ಯಾಚರಣೆ ನಡೆಸಿದ ಕಾವೂರು ಠಾಣಾ ಪೊಲೀಸರು ಹಾಗೂ ರೌಡಿ ನಿಗ್ರಹ ದಳದ ಪೊಲೀಸರು ಮೂವರು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿಗಳನ್ನು ಬಂಧಿಸಿದ್ದಾರೆ.
ವಾಮಂಜೂರು ನಿವಾಸಿ ಮಯ್ಯದ್ದಿ(37), ಗುರುಪುರ ನಿವಾಸಿ ಕುಮಾರ್ ಶೆಟ್ಟಿ(39) ಹಾಗೂ ಮೂಡುಶೆಡ್ಡೆಯ ಉಮೇಶ್(47) ಬಂಧಿತ ಆರೋಪಿಗಳು. ಬಂಧಿತರಿಂದ 26 ಸಾವಿರ ನಗದು ಹಾಗೂ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಎಂ ಮಾರ್ಕೆಟ್ ಪ್ಲೆ 63 ಆನ್ ಲೈನ್ ಎಂಬ ಬೆಟ್ಟಿಂಗ್ ಮೊಬೈಲ್ ಅಪ್ಲಿಕೇಶನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು.
ಆರ್ ಸಿಬಿ ಹಾಗೂ ರಾಜಸ್ಥಾನ ತಂಡಗಳ ನಡುವಿನ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬೆಟ್ಟಿಂಗ್ ನಲ್ಲಿ ಸಂಗ್ರಹವಾದ ಹಣವನ್ನು ಪಡೆದುಕೊಂಡು ಹೋಗಲು ವಿಶಾಲ್ ಮತ್ತು ಅಶೋಕ್ ಸ್ಥಳಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದ್ದು, ಅವರ ಬಂಧನಕ್ಕೂ ಕೂಡ ಉತ್ತರ ಉಪವಿಭಾಗ ರೌಡಿ ನಿಗ್ರಹ ದಳ ಕಾರ್ಯಾಚರಣೆ ನಡೆಸುತ್ತಿದೆ ಎನ್ನಲಾಗಿದೆ.