ಬಂಟ್ವಾಳ, ಜು 30 (DaijiworldNews/MS): ತಾಲೂಕಿನ ವಗ್ಗ-ಉಳಿ ರಸ್ತೆ 4 ಕೋ.ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆದಿದ್ದರೂ ಮಣಿನಾಲ್ಕೂರು ಗ್ರಾಮದ ಬಡೆಕೊಟ್ಟುವಿನಲ್ಲಿ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು, ಹಲವು ತಿಂಗಳುಗಳು ಕಳೆದರೂ ಪೂರ್ಣಗೊಳ್ಳದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಗ್ಗದಿಂದ ಕಕ್ಯಪದವುನ್ನು ಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯ ಮೂಲಕ ಕಳೆದ ವರ್ಷ ಅನುದಾನ ಒದಗಿಸಲಾಗಿತ್ತು.ಕಕ್ಯಪದವು ವರೆಗಿನ ರಸ್ತೆಯನ್ನು ಅಗಲೀಕರಣ ಗೊಳಿಸಿ ಅಭಿವೃದ್ಧಿಗೊಳಿಸಿ ಸರ್ವ ಋತು ರಸ್ತೆಯನ್ನಾಗಿಸಲಾಗಿತ್ತು. ಬಡೆಕೊಟ್ಟು ಬಳಿ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿ ಅಗೆದು ಜಲ್ಲಿ ಹಾಕಲಾಗಿತ್ತು. ರಸ್ತೆಯ ಒಂದು ಭಾಗಕ್ಕೆ ಡಾಮರು ಹಾಕಲಾಗಿತ್ತು. ಆದರೆ ಇನ್ನೊಂದು ಭಾಗದಲ್ಲಿ ಸುಮಾರು ೫೦ ಮೀಟರ್ನಷ್ಟು ರಸ್ತೆಗೆ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ. ಹಾಗೆ ಬಿಟ್ಟು ಹೋದ ಗುತ್ತಿಗೆದಾರರು ಮತ್ತೆ ಈ ಕಡೆ ತಲೆ ಹಾಕಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ. ಇಲ್ಲಿ ತಿರುವು ಇದ್ದು ಹಗಲು ಹೊತ್ತಿನಲ್ಲಿ ವಾಹನಗಳು ಒಂದು ಬದಿಯಿಂದ ಸಾಗಿದರೂ ರಾತ್ರಿ ಹೊತ್ತಿನಲ್ಲಿ ಅಪಾಯಕಾರಿಯಾಗಿದೆ. ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳುವ ಅವಕಾಶವಿದೆ.
ರಸ್ತೆ ಬದಿ ಗುಂಡಿ: ಇದೇ ರಸ್ತೆಯಲ್ಲಿ ಇಲ್ಲಿಂದ ಸ್ವಲ್ಪ ಮುಂದಕ್ಕೆ ರಸ್ತೆ ಬದಿ ಗುಂಡಿಯೊಂದು ಬಾಯ್ದೆರೆದು ನಿಂತಿದೆ. ಈ ಗುಂಡಿ ರಸ್ತೆಯ ಒಂದು ಭಾಗವನ್ನು ನುಂಗಿ ಹಾಕಿದೆ. ಪೈಪ್ಲೈನ್ ಕಾಮಗಾರಿಗಾಗಿ ಈ ಗುಂಡಿ ತೋಡಿದ್ದು, ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಹಾಗೆಯೇ ಉಳಿದಿದೆ. ರಸ್ತೆ ಬದಿ ನೀರು ಹರಿದು ಗುಂಡಿ ಅಗಲವಾಗುತ್ತಾ ಇದೆ. ಇಲ್ಲಿ ರಸ್ತೆಗೆ ಡಾಮರು ಹಾಕದಿರವುದರಿಂದ ರಸ್ತೆಯೂ ಕೆಟ್ಟಿದೆ. ಆದರೆ ಸಂಬಂಧಿತ ಅಧಿಕಾರಿಗಳು ಇದರ ದುರಸ್ತಿಗೆ ಮುಂದಾಗದಿರುವುದು ದ್ವಿಚಕ್ರ ವಾಹನದ ನಿತ್ಯ ಪ್ರಯಾಣಿಕರು ಹಾಗೂ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.