ಕುಂದಾಪುರ, ಜು 29 (DaijiworldNews/HR): ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ ಭಾನುವಾರ ನಡೆಯಲಿದ್ದು, ಹೈಕೋರ್ಟಿನಿಂದ ಅವಕಾಶ ಪಡೆದ ಮತದಾರರ ಪಟ್ಟಿಯನ್ನು ನಿಯಮಗಳ ಪ್ರಕಾರ ನೀಡಿಲ್ಲ ಎಂದು ಆರೋಪಿಸಿ ಬಿಜೆಪಿ ಇಂದು ಸೊಸೈಟಿ ಮುಂಭಾಗ ಪ್ರತಿಭಟನೆ ನಡೆಸಿತು.
ಚುನಾವಣಾ ನಿಯಮಗಳ ಪ್ತಕಾರ ಅಭ್ಯರ್ಥಿಗಳ ಆಯ್ಕೆ, ನಾಮಪತ್ರ ಪರಿಶೀಲನೆ, ಮೊದಲಾದ ಪ್ರಕ್ರಿಯೆಗಳು ನಡೆದ ಬಳಿಕ ನಾಳೆ (ಭಾನುವಾರ) ಚುನಾವಣೆ ನಡೆಯಲಿದೆ. ಒಟ್ಟು 2170 ಮತದಾರರಿದ್ದು, ಈ ಬಗ್ಗೆ ಶಂಕರಾಚಾರ್ಯ ಎಂಬುವರು ಹೈಕೋರ್ಟಿಗೆ ಹೋಗಿದ್ದರು. ಪರಿಣಾಮವಾಗಿ ಹೆಚ್ಚುವರಿ 534 ಮತದಾರರಿಗೆ ಮತದಾನಕ್ಕೆ ಅವಕಾಶ ನೀಡುವಂತೆ ಹೈ ಕೋರ್ಟ್ ಆದೇಶ ನೀಡಿತ್ತು.
ಆದರೆ ಸೇರ್ಪಡೆಗೊಂಡ ಮತದಾರರ ಪಟ್ಟಿ ಚುನಾವಣೆಗೆ ಒಂದು ದಿನ ಇರುವಾಗ ನೀಡಲಾಗಿದ್ದು, ಇದು ರಾಜಕೀಯ ದುರುದ್ಧೇಶದಿಂದ ಕೂಡಿದೆ ಎಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪ್ರತಿಭಟನೆ ನಡೆಸಲಾಯಿತು.
ಈ ಸಂಧರ್ಭ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ಪ್ರತಾಪ್ ಮಾತನಾಡಿ, ಸೊಸೈಟಿ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ರಾಜಕೀಯ ಪ್ರೇರಿತರಾಗಿ ವರ್ತಿಸುತ್ತಿದ್ದಾರೆ. ಅದುದರಿಂದ ಚುನಾವಣೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ವಿಠಲ ಪೂಜಾರಿ ಮಾತನಾಡಿ, ನಾಳೆ ನಡೆಯುವ ಚುನಾವಣೆ ಸಂವಿಧಾನ ಬಾಹಿರ ಈ ಬಗ್ಗೆ ಹೋರಾಟ ಮುಂದುವರೆಸುತ್ತೇವೆ. ಹೈಕೋರ್ಟ್ ಅವಕಾಶ ಕಲ್ಪಿಸಿದ ಮತದಾರರ ಪೈಕಿ 20 ಜನ ಸತ್ತುಹೋಗಿದ್ದಾರೆ. ಅವರಿಗೆ ಮತದಾನ ನೀಡಲಾಗಿದೆ ಎನ್ನುವುದೇ ಹಾಸ್ಯಾಸ್ಪದ ಎಂದರು.
ಬಳಿಕ ಪ್ರತಿಕ್ರಿಯಿಸಿದ ರಿಟರ್ನಿಂಗ್ ಆಫೀಸರ್ ರೋಹಿತ್, ನಿಯಮದಂತೆ ಭಾನುವಾರ ಬೆಳಿಗ್ಗೆ ಚುನಾವಣೆ ನಡೆಯಲಿದೆ. ಹೈಕೋರ್ಟ್ ಆದೇಶ ಪಾಲುಸಲಾಗುವುದು ಎಂದಿದ್ದಾರೆ.
ಅರ್ಹ ಮತದಾರರಿಗೆ ಮಾತ್ರ ಮತದಾನ ಇರುವುದರಿಂದ ಸತ್ತವರ ಬಗ್ಗೆ ಚಿಂತಿಸಬೇಕಿಲ್ಲ ಎನ್ನುವುದು ಕಾಂಗ್ರೆಸ್ ಬೆಂಬಲಿತರ ಅಭಿಪ್ರಾಯ. ಒಟ್ಟಿನಲ್ಲಿ ನಾಳೆ ನಡೆಯಲಿರುವ ಚುನಾವಣೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.