ಮಂಗಳೂರು, ಜು 29 (DaijiworldNews/HR): ಕರಾವಳಿಯಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳ ಹೆಚ್ಚಳದಿಂದ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೂ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅನೈತಿಕ ಪೊಲೀಸ್ ಗಿರಿ ಎಸಗುವ ಆರೋಪಿಗಳಿಗೆ ಕನಿಷ್ಠ ಏಳು ವರ್ಷಗಳ ಸಜೆಯೊಂದಿಗೆ ಕಠಿಣ ಕಾನೂನು ರೂಪಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿ ಹಾಗೂ ಅವರ ಮನೆಯವರ ಮೇಲೆ ಈ ರೀತಿ ಬೀದಿಯಲ್ಲಿ ಧರ್ಮದ ಹೆಸರು ಕೇಳಿ ಹಲ್ಲೆ ನಡೆಸುತ್ತಾರೆಂದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗಾಗಬೇಡ ಎಂದು ಪ್ರಶ್ನಿಸಿದರು.
ಇಂತಹ ಅನೈತಿಕ ಪೊಲೀಸ್ ಗಿರಿಗೆ ಕುಮ್ಮಕ್ಕು ನೀಡುವ ಹಿಂದಿನ ಶಕ್ತಿಯನ್ನು ಪತ್ತೆಹಚ್ಚಬೇಕಾಗಿದೆ ಎಂದ ಅವರು, ಉಡುಪಿ ಪ್ರಕರಣದ ಬಗ್ಗೆ ಬೀದಿಳಿದಿರುವ ಶಾಸಕರು, ಸಂಸದರು ಈ ಪ್ರಕರಣದ ಬಗ್ಗೆ ತಮ್ಮ ನಿಲುವೇನು ಎಂದು ಸ್ಪಷ್ಟಪಡಿಸಬೇಕು. ಬಂಟ್ವಾಳ ಶಾಸಕರು ಯಾಕೆ ಧ್ವನಿ ಎತ್ತಿಲ್ಲ. ಪೊಲೀಸ್ ಸಿಬ್ಬಂದಿಯ ಪತ್ನಿ ಮೇಲೆಯೂ ಹಲ್ಲೆ ನಡೆಸಲಾಗಿದೆ. ಅವರು ಹೆಣ್ಣಲ್ಲವೇ? ಬಿಜೆಪಿಯವರಿಂದ ದ್ವಂದ್ವ ನಿಲುವು ಏಕೆ ಎಂದು ಪ್ರಶ್ನಿಸಿದರು.ಉಡುಪಿಯ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮಾಡಬೇಕೆನ್ನುವುದು ಸರಿ, ಆದರೆ ಕಾನೂನು ಕೈಗೆತ್ತಿಕೊಂಡು, ರಾಜಕೀಯ ಮಾಡಿ ಸಮಾಜವನ್ನು ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ. ರಾಜಕೀಯಕ್ಕಾಗಿ ಮಕ್ಕಳ ಭವಿಷ್ಯ ಹಾಳು ಮಾಡಲಾಗುತ್ತಿದೆ. ಇದನ್ನು ಖಂಡಿಸುವುದಾಗಿ ಐವನ್ ಹೇಳಿದರು.