ಕಡೂರು, ಎ04(SS): ಪ್ರಮೋದ್ ಮಧ್ವರಾಜ್ ಯಾವ ಪಕ್ಷದ ಅಭ್ಯರ್ಥಿ ಎಂಬುದು ಅವರಿಗೇ ಗೊತ್ತಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸಾಂದರ್ಭಿಕ ಶಿಶು. ಪ್ರಮೋದ್ ಮಧ್ವರಾಜ್ ಯಾವ ಪಕ್ಷದ ಅಭ್ಯರ್ಥಿ ಎಂಬುದು ಅವರಿಗೇ ಗೊತ್ತಿಲ್ಲ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುವಂತೆ ನಾನು ಹೇಗೆ ಸಾಂದರ್ಭಿಕ ಶಿಶುವೋ ಹಾಗೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಮಧ್ವರಾಜ್ ಸಹ ಸಾಂದರ್ಭಿಕ ಶಿಶು. ಯಾರೂ ಇಲ್ಲದ ಕಾರಣ ಪ್ರಮೋದ್ ಅವರನ್ನು ಕರೆತಂದಿದ್ದಾರೆ ಎಂದು ತಿಳಿಸಿದರು.
ನರೇಂದ್ರ ಮೋದಿಯವರ ಚಿಂತನೆಯಂತೆ ನಮ್ಮ ರಾಷ್ಟ್ರವು ಆರ್ಥಿಕವಾಗಿ ಆರನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಮೋದಿಯವರು ಬಡವರಿಗಾಗಿ, ರೈತರಿಗಾಗಿ ಹಲವಾರು ಯೋಜನೆಗಳು, ರಾಷ್ಟ್ರ ರಕ್ಷಣೆಗಾಗಿ ಕೈಗೊಂಡ ದಿಟ್ಟ ಕ್ರಮ ಎಲ್ಲರ ಮನಮುಟ್ಟಿದೆ. ಯುವಕರ, ವಿದ್ಯಾವಂತರ ಮತ್ತು ಬುದ್ಧಿವಂತರ ದೇಶ ಭಾರತವಾಗಿದೆ. ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸಾಲಮನ್ನಾ ಮಾಡುತ್ತೇವೆ ಎಂದು ಬರಿ ತುಪ್ಪ ಹಚ್ಚುವ ಕೆಲಸವಾಗುತ್ತಿದೆ. ಬರಗಾಲದ ಕಾಮಗಾರಿಯೂ ನಡೆದಿಲ್ಲ ಎಂದು ಕಿಡಿಕಾರಿದರು.
ಪ್ರಮೋದ್ ಮಧ್ವರಾಜ್ ಉಡುಪಿ ಬಿಟ್ಟರೆ ಎಲ್ಲಿಗೆ ಬಂದಿದ್ದಾರೆ. ಪಕ್ಕದ ಕುಂದಾಪುರ, ಕಾರ್ಕಳಕ್ಕಾಗಲಿ ಪ್ರಮೋದ್ ಮಧ್ವರಾಜ್ ಹೋಗಿಲ್ಲ. ಸಚಿವರಾಗಿದ್ದಾಗ ಅವರು ಚಿಕ್ಕಮಗಳೂರಿಗೆ ಎಷ್ಟು ಬಾರಿ ಬಂದಿದ್ದಾರೆ ಎಂದು ಅವರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದರು.
ಪ್ರಮೋದ್ ಮಧ್ವರಾಜ್ ಅವರಿಗೆ ತಾನು ಜೆಡಿಎಸ್ ಅಭ್ಯರ್ಥಿಯೋ ಅಥವಾ ಕಾಂಗ್ರೆಸ್ ಅಭ್ಯರ್ಥಿಯೋ ಎಂಬ ಗೊಂದಲವಿದೆ. ಎರಡೂ ಚಿಹ್ನೆಗಳನ್ನು ಇಟ್ಟುಕೊಂಡು ತಿರುಗುತ್ತಿದ್ದಾರೆ. ಇಂತಹ ಗೊಂದಲದ ಅಭ್ಯರ್ಥಿ ನಮಗೆ ಬೇಕೆ... ? ಎಂದು ಕೇಳಿದರು.