ಪಡುಬಿದ್ರಿ, ಜು 28 (DaijiworldNews/SM): ಇನ್ನಾ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮೂಡು ಫಲಿಮಾರಿನಲ್ಲಿ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗುವ ಜಮೀನುಗಳಿಗೆ ಸರ್ವೇ ನಡೆಸಲು ಬಂದಿದ್ದ ತಂಡಕ್ಕೆ ಇನ್ನಾ ಗ್ರಾಮದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ವಿರೋಧಿಸಿದ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ಸ್ಥಗಿತಗೊಳಿಸಲಾಗಿದೆ.
ನಂದಿಕೂರು ಅದಾನಿ- ಉಡುಪಿ ಪವರ್ ಕಾರ್ಪೊರೇಷನ್ನಿಂದ ಕಾಸರಗೋಡಿಗೆ ವಿದ್ಯುತ್ ಸರಬರಾಜು ಮಾಡಲು ೪೦೦ ಕೆವಿ ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗಗಳು ಹಾದು ಹೋಗುವ ಜಮೀನುಗಳಿಗೆ ಭೂ ನಷ್ಟ ಪರಿಹಾರ ನಿಗದಿಪಡಿಸುವ ಸಂಬಂಧ ಜಮೀನಿನ ಅಳತೆ ಕಾರ್ಯ ನಡೆಸಿ ನಕ್ಷೆ ನೀಡುವ ಜಿಲ್ಲಾಧಿಕಾರಿ ಆದೇಶದಂತೆ ಭೂಸ್ವಾಧೀನ ನಡೆಸುವ ಜಂಟಿ ಸರ್ವೇ ಕಾರ್ಯವನ್ನು ನಡೆಸಲು ಮುಂದಾಗಿದೆ. ಇದನ್ನು ಅರಿತ ಸ್ಥಳೀಯರು ಜಮಾಯಿಸಿ ಸರ್ವೇ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಕಾರ್ಕಳ ತಹಶೀಲ್ದಾರ್ ಅನಂತ ಶೆಣೈ ಸ್ಥಳೀಯರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಈ ಪ್ರದೇಶದಲ್ಲಿ ಈಗಾಗಲೇ ಪಾದೂರು-ತೋಕೂರು ಪೈಪ್ಲೈನ್, ಎಲ್ಲೂರು-ಹಾಸನ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗಿದೆ. ಇದರಿಂದ ಕೃಷಿಭೂಮಿ ಹೆಚ್ಚಾಗಿರುವ ಇನ್ನಾ ಗ್ರಾಮಕ್ಕೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಈ ಪರಿಸರದಲ್ಲಿ ವಿದ್ಯುತ್ ಪ್ರಸರಣ ಮಾರ್ಗ ಹಾದುಹೋಗುವುದು ಬೇಡ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವೇ ಕಾರ್ಯವನ್ನ ನಡೆಸಲು ಬಂದಿದ್ದ ಸರ್ವೇ ತಂಡ, ಗುತ್ತಿಗೆ ವಹಿಸಿದ್ದ ಸ್ಟರ್ಲೈಟ್ ಕಂಪೆನಿ ಹಾಗೂ ತಾಲ್ಲೂಕು ಆಡಳಿತ ಸ್ಥಳದಲ್ಲಿ ಈ ಸಂದರ್ಭದಲ್ಲಿ ಹಾಜರಿತ್ತು. ಪಡುಬಿದ್ರಿ ಪೊಲೀಸ್ ಎಸ್ಐ ಪ್ರಸನ್ನ ಬಂದೋಬಸ್ತ್ ವಹಿಸಿದ್ದರು.
ಇನ್ನಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಾ ಆರ್.ಮೂಲ್ಯ ಮಾತನಾಡಿ, ರೈತರ ವಿರೋಧ ಇರುವುದರಿಂದ ಸರ್ವೇ ಕಾಮಗಾರಿಯನ್ನು ತಕ್ಷಣದಿಂದ ಕೈಬಿಡಬೇಕು. ಕಾಸರಗೋಡಿಗೆ ಹೋಗುವ ಲೈನ್ ಇದಾಗಿದ್ದು, ಇದರಿಂದ ರೈತರ ಕೃಷಿ ಭೂಮಿ, ವಾಸದ ಮನೆ, ಶಾಲಾ ಮೈದಾನದ ಮುಖಾಂತರ ಹಾದು ಹೋಗುತ್ತಿದೆ. ಇದರಿಂದ ರೈತರಿಗೆ ಮತ್ತು ನಾಗರಿಕರಿಗೆ ತೊಂದರೆ ಉಂಟಾಗಲಿದೆ. ಆಗಸ್ಟ್ ೧೪ರಂದು ನಡೆಯುವ ಗ್ರಾಮಸಭೆಯ ಗ್ರಾಮಸ್ಥರ ತೀರ್ಮಾನದಂತೆ ಮುಂದೆ ನಿರ್ಧರಿಸಲಾಗುವುದು ಎಂದರು.