ಮಂಗಳೂರು, ಎ04(SS): ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ವೈಫಲ್ಯಗಳ ಸರದಾರರಾಗಿದ್ದಾರೆ ಎಂದು ಎಂದು ಕಾಂಗ್ರೆಸ್ನ ಜಿಲ್ಲಾ ಮಾಧ್ಯಮ ವಕ್ತಾರ ಎ.ಸಿ. ವಿನಯ್ ರಾಜ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ 10 ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಇನ್ನೂ ಕೂಡ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಈ ಬಗ್ಗೆ ಮಹಾ ನಗರ ಪಾಲಿಕೆ ಮತ್ತು ಶಾಸಕರ ಮೇಲೆ ಆರೋಪ ಮಾಡಲಾಗುತ್ತಿದೆ. ಆದರೆ ಅವರಿಂದ ಕಾಮಗಾರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
600 ಮೀಟರ್ ಉದ್ದ ಪಂಪ್ವೆಲ್ ಮೇಲ್ಸೇತುವೆ ಮಾಡಲು 8 ವರ್ಷಗಳಾದರೂ ಸಾಧ್ಯವಾಗಿಲ್ಲ. ಜಿಲ್ಲೆಯ ವ್ಯಾಪಾರ ವಹಿವಾಟಿನ ಪ್ರಧಾನ ಸಂಪರ್ಕ ರಸ್ತೆಯಾದ ತೊಕ್ಕೊಟ್ಟು ರಸ್ತೆಯ ಮೇಲ್ಸೇತುವೆ ಕೂಡ ಪೂರ್ಣಗೊಂಡಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಸಂಸದ ನಳಿನ್ ಕುಮಾರ್ ಕಟೀಲು ಒಬ್ಬ ವೈಫಲ್ಯಗಳ ಸರದಾರ ಎಂದು ಹೇಳಬಹುದು ಎಂದು ವ್ಯಂಗ್ಯ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವ ಕಾಮಗಾರಿಗಳು ಕಾಂಗ್ರೆಸ್ ಅವಧಿಯಲ್ಲಿ ಆಗಿರುವಂತಹದು. ದಕ್ಷಿಣ ಜಿಲ್ಲೆಯಲ್ಲಿ 28 ವರ್ಷಗಳಿಂದ ಬಿಜೆಪಿಯವರೇ ಸಂಸದರಾಗಿ ಆಯ್ಕೆಯಾದರೂ ಇಲ್ಲಿನ ಅಭಿವೃದ್ಧಿ ಶೂನ್ಯವಾಗಿದೆ. ಆದ್ದರಿಂದ ಈ ಬಾರಿ ವಿದ್ಯಾವಂತ ಯುವಜನತೆಯ ಪ್ರತಿನಿಧಿ, ಸರ್ವಧರ್ಮ ಸಮಬಾಳ್ವೆಯ ಮಿಥುನ್ ರೈ ಅವರ ಪರ ಜನರು ಮತದಾನ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸುತ್ತಿರುವ ಬಿಜೆಪಿಯವರು ದ.ಕ. ಜಿಲ್ಲೆಗೆ ಕಳೆದ 28 ವರ್ಷಗಳಲ್ಲಿ ಬಿಜೆಪಿಯ ಕೊಡುಗೆ ಏನು ಎಂದು ಕೇಳಲಿ. ಕಳೆದ 10 ವರ್ಷಗಳಲ್ಲಿ ಹಾಲಿ ಸಂಸದರ ಕೊಡುಗೆ ಏನು ಎಂಬ ಬಗ್ಗೆ ಅಂಕಿಅಂಶಗಳ ಜತೆಗೆ ಚರ್ಚೆಗೆ ಬರಲಿ, ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತ ಕೂಡ ಅವರ ಹೇಳಿಕೆಗಳನ್ನು ಸುಳ್ಳು ಎಂದು ಸಾಬೀತು ಮಾಡಬಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯವರು ಸ್ಮಾರ್ಟ್ ಸಿಟಿಯನ್ನು ಕೇಂದ್ರದ ಕೊಡುಗೆ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ 2100 ಕೋಟಿ ರೂ.ಗಳ ಈ ಯೋಜನೆಯಲ್ಲಿ ಕೇಂದ್ರ ಸರಕಾರದ ಪಾಲು ನಾಲ್ಕನೇ ಒಂದು ಭಾಗ ಮಾತ್ರ. 500 ಕೋಟಿ ರೂ.ಗಳನ್ನು ಮಾತ್ರ ಕೇಂದ್ರ ಸರ್ಕಾರ ಭರಿಸಲಿದೆ. ಉಳಿದ 500 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಹಾಗೂ ಬಾಕಿ ಹಣವನ್ನು ಸ್ಥಳೀಯ ಸಂಸ್ಥೆಗಳು ಭರಿಸಬೇಕಾಗಿದೆ. ಹೀಗಿರುವಾಗ ಸ್ಮಾರ್ಟ್ ಸಿಟಿ ಕೇಂದ್ರದ ಯೋಜನೆ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.