ಕಾರ್ಕಳ,ಜು 28 (DaijiworldNews/MS): ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಹೊಂಡಮಯವಾಗಿವೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಯಾಗುತ್ತಿದ್ದು, ಪಾದಚಾರಿಗಳ ನಡೆದಾಡುವುದಕ್ಕೂ ಕಷ್ಟಕರವಾಗಿದೆ ಎಂಬ ದೂರುಗಳು ಸಾರ್ವಜನಿಕ ವಲಯಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.
ಮಂಗಳೂರು ರಸ್ತೆ: ಪ್ರತಿವರ್ಷ ಇದೇ ರಸ್ತೆಯಲ್ಲಿ ಕಾಣಸಿಗುವ ಹೊಂಡ ಗುಂಡಿಗಳಿಂದ ಭಾರೀ ಸುದ್ದಿಗ್ರಾಸ್ತವಾಗುವ ಈ ರಸ್ತೆ ರಾಜಕೀಯ ಮೇಲಾಟಕ್ಕೂ ಕಾರಣವಾಗುತ್ತಿದೆ.
ಕಳೆದ ವರ್ಷ ಕೂಡಾ ಇದೇ ರಸ್ತೆಯ ಸ್ಥಿತಿ ಗತಿಯನ್ನು ಮುಂದಿಟ್ಟು ರಾಜಕೀಯ ಹೋರಾಟ ಹಾ-ರಾಟ ನಡೆದ ಬಳಿಕ ಲಕ್ಷಾಂತರ ವೆಚ್ಚ ಭರಿಸಿ ಒಂದಿಷ್ಟು ಅಳತೆಯ ದೂರದ ವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿತ್ತು. ಅಭಿವೃದ್ಧಿಗೊಂಡ ರಸ್ತೆಯ ಮತ್ತೊಂದು ಭಾಗದಲ್ಲಿ ಪ್ರಸಕ್ತ ಸಾಲಿನ ಮಳೆಗೆ ಭಾರೀ ಗಾತ್ರದ ಹೊಂಡ ಕಾಣಸಿಗುತ್ತಿದೆ.
ಇಕ್ಕಟಾಗಿರುವ ಇದೇ ರಸ್ತೆಯಲ್ಲಿ ಫುಟ್ ಬಾತ್ ಇಲ್ಲದೇ ಪಾದಚಾರಿಗಳು ರಸ್ತೆಯಲ್ಲಿಯೇ ನಡೆದಾಡುತ್ತಿದ್ದಾರೆ. ಹೊಂಡ-ಗುಂಡಿಯಲ್ಲಿ ತುಂಬಿರುವ ಮಳೆ ಮಿಶ್ರಿತ ಕೆಸರು ನೀರು ವಾಹನಗಳ ಓಡಾಟಕ್ಕೆ ಪಾದಚಾರಿಗಳಿಗೆಅಭಿಷೇಕವಾಗುತ್ತಿರುವುದು ಸವೇ ಸಾಮಾನ್ಯವಾಗಿದೆ.
ಕೂಡು ರಸ್ತೆಯ ಭಾಗವಾಗಿದ್ದು ಇದೇ ರಸ್ತೆಯಾಗಿ ಅಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗೆ ತೆರಳುತ್ತಿದ್ದಾರೆ.
ಆಸ್ಪತ್ರೆ, ಬ್ಯಾಂಕ್, ಅಂಚೆ ಕಚೇರಿ,ಮಸೀದಿ ಸಹಿತ ಇತರ ವಾಣಿಜ್ಯ ವ್ಯವಹಾರಗಳು ಹೆಚ್ಚಾಗಿ ಕಾರ್ಯಚರಿಸುತ್ತಿದ್ದು, ಇದಲ್ಲ ಒಂದು ಕಾರಣದಿಂದ ವಯೋಮಿತಿ,ಲಿಂಗತಾರತಮ್ಯೆ ಎನ್ನದೇ ಅಸಂಖ್ಯಾತರು ನಡೆದಾಡುವ ರಸ್ತೆ ಇದಾಗಿದೆ.
ಹೊಂಡ ಮುಚ್ಚುವ ಸತ್ಕಾರ್ಯ ನಡೆಸಲಿ
ಘನ,ಲಘ ವಾಹನಗಳು ಓಡಾಡುತ್ತಿದ್ದು, ಮಳೆನೀರು ಹೊಂಡದಲ್ಲಿ ಶೇಖರಣೆಗೊಳ್ಳುತ್ತಿರುವುದರಿಂದ ಹೊಂಡ ಗಾತ್ರವನ್ನು ಅರಿತುಕೊಳ್ಳಲು ಸವಾರರು, ಚಾಲಕರಿಗೆ ಸಾಧ್ಯವಾಗುತ್ತಿಲ್ಲ. ವಾಹನಗಳು ಮುಂದಕ್ಕೆ ಚಲಾಯಿಸದಾಗಲೇ ಅದರ ಚಕ್ರಹೊಂಡ ಹೊಂಡಕ್ಕೆ ಬಿದ್ದಾಗ ಹೊಂಡದ ಗಾತ್ರ ಸವಾರರ,ಚಾಲಕರ ಗಮನಕ್ಕೆ ಬರಲು ಸಾಧ್ಯವಾಗುತ್ತದೆ. ಅಷ್ಟೊತ್ತಿಗೆ ಕೆಲ ಬೈಕ್ ಸವಾರರು ಆಯಾತಪ್ಪಿ ರಸ್ತೆ ಮೇಲೆ ಪಲ್ಟಿ ಹೊಡೆದರೆ, ಕೆಲ ಲಘ ವಾಹನಗಳು ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುವ ವಾಹನಕ್ಕೆ ಡಿಕ್ಕಿ ಹೊಡೆದ ಅದೆಷ್ಟೋ ನಿದರ್ಶನ ಬೆಳಕಿಗೆ ಬಂದಿದೆ.
ಹೊಂಡಕ್ಕೆ ಕಲ್ಲು ತುಂಬಿಸಿ ತಾತ್ಕಾಲಿಕ ಕಾಮಗಾರಿಯಾದರೂ ಮಳೆಗಾಲದಲ್ಲಿ ನಡೆಸುವ ಮೂಲಕ ವಾಹನಗಳ ಸುಗಮಸಂಚಾರಕ್ಕೆ ಅನುವು ಮಾಡಿಕೊಂಡುವ ಹೊಣೆಗಾರಿಕೆ ಕಾರ್ಕಳ ಪುರಸಭೆಯ ಆಡಳಿತ ವರ್ಗದಾಗಿದೆ.
ಉಡುಪಿ ಜಿಲ್ಲಾಡಳಿತ ಇದರ ಕುರಿತು ಗಮನ ಹರಿಸಿ ರಸ್ತೆಗಳಲ್ಲಿರುವ ಹೊಂಡ ಗುಂಡಿಗಳಿಗೆ ಮುಕ್ತಿ ನೀಡಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲೇ ಬೇಕಾಗಿದೆ.