ಮಂಗಳೂರು, ಜು 27:(DaijiworldNews/SM): "ನಾವು ನಿಮ್ಮೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ, ಭಯಪಡುವ ಅಗತ್ಯವಿಲ್ಲ, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಮೂಲಕ ಹಿಂಸಾಚಾರವನ್ನು ಮರೆಮಾಡಲಾಗಿದೆ. ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಕೃತ್ಯವು ಇಡೀ ಜಗತ್ತಿಗೆ ಸಾಕ್ಷಿಯಾದ ಭಯಾನಕ ಮತ್ತು ನಾಚಿಕೆಗೇಡಿನ ಘಟನೆಯಾಗಿದೆ ಎಂದು ಕ್ರೈಸ್ತ ಮುಖಂಡ ರಾಯ್ ಕ್ಯಾಸ್ಟೆಲಿನೊ ಹೇಳಿದ್ದಾರೆ.
ಅವರು ಜುಲೈ 27 ರಂದು ಮಣಿಪುರದಲ್ಲಿ ನಡೆದ ಹಿಂಸಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಕ್ಯಾಥೋಲಿಕ್ ಸಭಾ, ಮಂಗಳೂರು ಪ್ರದೇಶ ಮತ್ತು ಇತರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಮಣಿಪುರದಲ್ಲಿ ನಡೆದ ಘಟನೆಯ ನಂತರ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರವನ್ನು ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಟೀಕಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಅದಾನಿ ಮತ್ತು ಅಂಬಾನಿಯವರಿಗೆ ಒಲವು ತೋರುತ್ತಿದೆ ಎಂದು ಆರೋಪಿಸಿದರು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿದ ಅವರು, ಮಣಿಪುರದಲ್ಲಿ ಬೆತ್ತಲೆಯಾಗಿಸಿ ಮೆರವಣಿಗೆ ನಡೆಸಲ್ಪಟ್ಟ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವಂತೆ ವಿದ್ಯಾ ದಿನಕರ್ ಆಗ್ರಹಿಸಿದ್ದಾರೆ.
ಮಂಗಳೂರು ಧರ್ಮಪ್ರಾಂತದ ಶ್ರೇಷ್ಠ ಗುರು ಮೋನ್ಸಿಜೋರು ಮ್ಯಾಕ್ಸಿಮ್ ನೊರೊನ್ಹಾ, ಮಾಜಿ ಸಚಿವ ರಮಾನಾಥ ರೈ, ಕೆಥೋಲಿಕ್ ಸಭಾ ಮಂಗಳೂರು ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ಜೆ.ಬಿ. ಸಲ್ದಾನ, ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.