ಉಳ್ಳಾಲ, ಜು 27 (DaijiworldNews/SM):ಓವರ್ ಲೋಡ್ ಇದ್ದ ಲಾರಿ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ನಾಟೆಕಲ್ - ಮಂಜನಾಡಿ ಮಾರ್ಗ ಮಧ್ಯೆ ಸಂಭವಿಸಿದೆ.
ಘಟನೆಯಲ್ಲಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ಇದ್ದ ಲಾರಿ ತೆರಳುತ್ತಿದ್ದು, ಈ ನಡುವೆ ತಿರುವಿನಲ್ಲಿ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಎದುರಿನಿಂದ ಬಂದಿದೆ. ಲಾರಿಯಲ್ಲಿ ಓವರ್ ಲೋಡ್ ಇದ್ದ ಹಿನ್ನೆಲೆಯಲ್ಲಿ ಚಾಲಕ ಎದುರಿನ ಲಾರಿಗೆ ಸೈಡ್ ಕೊಡುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿರುವುದು ದೃಶ್ಯದಲ್ಲಿ ಸೆರೆಯಾಗಿದೆ.