ಕಾಸರಗೋಡು, ಜು 27 (DaijiworldNews/HR): ಬೆಂಗಳೂರು ಕೇಂದ್ರೀಕರಿಸಿ ಜಿಲ್ಲೆಗೆ ಎಂಡಿಎಂಎ ಮಾದಕ ವಸ್ತು ಸಾಗಾಟದ ಸೂತ್ರಧಾರ ನೋರ್ವನನ್ನು ಡಿವೈಎಸ್ಪಿ ಸಿ.ಕೆ ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತನನ್ನು ನೈಜೀರಿಯಾದ ಮೋಸೆಸ್ ಮೋ೦ಡೆ (33) ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಗುರುವಾರ ಬೆಳಿಗ್ಗೆ ಬೆಂಗಳೂರಿನಿಂದ ಕಾಸರಗೋಡಿಗೆ ತಲುಪಿಸಲಾಗಿದೆ. ಈತನ ನೇತೃತ್ವದ ತಂಡವು ಕಾಸರಗೋಡು ಜಿಲ್ಲೆಗೆ ಹಲವಾರು ಬಾರಿ ಮಾದಕ ವಸ್ತು ತಲಪಿಸಿದ್ದು, ಮಾದಕ ವಸ್ತು ವ್ಯವಹಾರ ಬಗ್ಗೆ ಮಹತ್ವದ ಸುಳಿವು ಲಭಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೆನಾ ತಿಳಿಸಿದ್ದಾರೆ.
ಈ ಹಿಂದೆ ಕೊಕೇನ್ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೋಸೆಸ್ ಮೋ೦ಡೆ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆ ಗೊಂಡಿದ್ದ ಈತ ಎಂಡಿಎಂಎ ಮಾದಕ ವಸ್ತು ವಹಿವಾಟು ನಡೆಸುತ್ತಿದ್ದನು ಎಂದು ಎಸ್ಪಿ ತಿಳಿಸಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಬೇಕಲ ಠಾಣಾ ವ್ಯಾಪ್ತಿಯಲ್ಲಿ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೈಜೀರಿಯಾದ ಹಫ್ಸತ್ ರಿಯಾನಾತ್ ಎಂಬ ಯುವತಿಯನ್ನು ಬಂಧಿಸಲಾಗಿತ್ತು. ಈಕೆಯಿಂದ ಮಾಹಿತಿ ಪಡೆದಿದ್ದ ಪೊಲೀಸರು ತನಿಖೆ ನಡೆಸಿ ಬೆಂಗಳೂರಿನಿಂದ ಸಾಗಾಟದ ರೂವಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.