ಕುಂದಾಪುರ, ಜು 27 (DaijiworldNews/MS): ಕರಾವಳಿಯಲ್ಲಿ ಬೀಸುತ್ತಿರುವ ಭಾರೀ ಗಾಳಿ ಹಾಗೂ ಸುರಿಯುತ್ತಿರುವ ಮಳೆಗೆ ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಆದರೆ ಬೈಂದೂರು ತಾಲೂಕಿನ ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾರಾಪತಿ ಎಂಬಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವೊಂದು ಗುರುವಾರ ನಸುಕಿನಲ್ಲಿ ಕುಸಿದು ಬಿದ್ದಿದೆ.
ಸುಮಾರು 30 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಇಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಇದ್ದು 120 ಮಕ್ಕಳು ಹಾಗೂ ಕಿಂಡರ್ ಗಾರ್ಡನ್ ಮಾದರಿಯಲ್ಲಿ 30 ಮಕ್ಕಳು ಕಲಿಯುತ್ತಿದ್ದಾರೆ. ಕೊಠಡಿಯ ಕೊರತೆಯಿಂದಾಗಿ ಕುಸಿತಕ್ಕೊಳಗಾದ ಕಟ್ಟಡದಲ್ಲಿ ಮಳೆಗಾಲ ಹೊರತುಪಡಿಸಿ ಇತರೆ ಸಮಯದಲ್ಲಿ ಎರಡು ತರಗತಿಗಳನ್ನು ನಡೆಸಲಾಗುತ್ತಿತ್ತು.
ಕಳೆದ ಮೂರು ವರ್ಷಗಳಿಂದ ಈ ಕಟ್ಟಡವು ಜೀರ್ಣಾವಸ್ಥೆಗೊಳಗಾಗಿದ್ದು, ಕಟ್ಟಡವನ್ನು ಮಗುಚಿ ಬೇರೆ ನಟ್ಟಡ ನಿರ್ಮಿಸುವಂತೆ ಶಾಲೆಯಿಂದ ಹಾಗೂ ಶಿಕ್ಷಣ ಇಲಾಖೆಯಿಂದ ವರದಿ ಸಲ್ಲಿಕೆಯಾಗಿದ್ದರೂ ಸಂಬಂಧಿಸಿದ ಇಂಜಿನಿಯರ್ ಗಳಾಗಲಿ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದಿಲ್ಲ. ಈ ಬಗ್ಗೆ ಇಲ್ಲಿನ ಮುಖಂಡರಾದ ಸದಾಶಿವ ಪಡುವರಿಯವರು ಮೂರು ವರ್ಷಗಳ ಹಿಂದೆಯೇ ಜಿಲ್ಲಾ ಪಂಚಾಯತ್ ಇಂಜಿನಿಯರ್ ಗಮನಕ್ಕೆ ತಂದಾಗ ಕಟ್ಟಡ ಭದ್ರವಾಗಿದೆ ಎಂದು ಅಂದಿನ ಇಂಜಿನಿಯರ್ ಶ್ರೀಕಾಂತ್ ಹೇಳಿದ್ದರು. ಬಳಿಕ ಕಳೆದ ವರ್ಷವೂ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ