ಕುಂದಾಪುರ, ಜು 27 (DaijiworldNews/MS): ಎರಡು ದಿನಗಳ ಹಿಂದೆ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತೆಗ್ಗರ್ಸೆ ಸಮೀಪದ ನೀರೋಡಿ ಎಂಬಲ್ಲಿ ಕೊಚ್ಚಿ ಹೋದ ಕಿರುಸೇತುವೆ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಳೆದ ವರ್ಷ ಪಟ್ಟಣ ಪಂಚಾಯಿತಿ ವತಿಯಿಂದ 3 ಲಕ್ಷ ಅನುದಾನದಲ್ಲಿ ಕಿರು ಸೇತುವೆ ನಿರ್ಮಿಸಲಾಗಿತ್ತು. ಈ ವರ್ಷದ ಆರಂಭದ ಮಳೆಗೆ ಈ ಕಿರು ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಶಾಲಾ ವಿದ್ಯಾರ್ಥಿಗಳಿಗೆ ರೈತರಿಗೆ ಕೂಲಿ ಕಾರ್ಮಿಕರಿಗೆ ಈ ರಸ್ತೆಯೇ ಆಧಾರವಾಗಿತ್ತು.
ಈ ಬಗ್ಗೆ ಪ್ರಕಟಗೊಂಡ ವರದಿಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಬೈಂದೂರಿ ತಹಸೀಲ್ದಾರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ಮೊದಲಾದವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಇಲ್ಲಿ ತಕ್ಷಣದಿಂದ ಸ್ಟೀಲ್ ಸೇತುವೆ ನಿರ್ಮಿಸಿ ಸ್ಥಳೀಯರ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆ ಕಡಿಮೆಯಾದ ಬಳಿಕ ಶಾಶ್ವತ ಸೇತುವೆ ನಿರ್ಮಿಸುವ ಭರವಸೆ ನೀಡಿದರು.
ಈ ಸಂದರ್ಭ ಸಾಮಾಜಿಕ ಹೋರಾಟಗಾರ ವೀರಭದ್ರ ಗಾಣಿಗ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಚನ್ನಯ್ಯ ಪೂಜಾರಿ, ವಾಸು ಮರಾಠಿ ಹಾಜರಿದ್ದರು.