ಕಾಸರಗೋಡು, ಜು 26 (DaijiworldNews/AK): ಆಟಿ ಕಳೆಂಜ ತುಳುನಾಡಿನ ಪುರಾತನ ಸಾಂಪ್ರದಾಯಿಕ ಜಾನಪದ ಕಲೆಯಾಗಿದ್ದು, ಆಷಾಢ ಮಾಸದಲ್ಲಿ ನಡೆಸಲಾಗುವ ಒಂದು ಆಚರಣಾತ್ಮಕವಾದ ಜಾನಪದ ನೃತ್ಯ ರೂಪವಾಗಿದೆ. ಈ ಕುಣಿತವನ್ನು ಆಟಿ(ಆಷಾಡ) ತಿಂಗಳಲ್ಲಿ ನಡೆಸುವುದರಿಂದ ಇದನ್ನು ಆಟಿಕಳಂಜ ಎಂದು ಕರೆಯುತ್ತಾರೆ. ಕಳಂಜನು ಊರಿಗೆ ಬಂದ ಮಾರಿಯನ್ನು (ರೋಗ-ರುಜಿನವನ್ನು) ಹೊಡೆದೋಡಿಸುತ್ತಾನೆ ಎನ್ನುವ ಆಶಯದಿಂದಾಗಿ ಈ ಕುಣಿತ ಪ್ರಕಾರವನ್ನು ಆಹ್ವಾನಿಸಿ ದಾನ ನೀಡುತ್ತಾರೆ. ರೈತರು ಕೃಷಿ ಕ್ಷೇತ್ರಗಳಲ್ಲಿ ತಮ್ಮ ಕೆಲಸವನ್ನು ಮುಗಿಸಿದ ನಂತರ ಮಳೆಗಾಲದಲ್ಲಿ ಅಷಾಡ ಬರುತ್ತದೆ. ಆಟಿಕಳಂಜನನ್ನು ಹಳ್ಳಿಗರು, ಜಾನುವಾರುಗಳು, ಬೆಳೆ ಮಾತ್ರವಲ್ಲದೇ ಮನುಕುಲದ ಕಲ್ಯಾಣಕ್ಕಾಗಿ ಬರುವ ಚೇತನ ಎಂದು ನಂಬಲಾಗಿದೆ.
ದಾಯ್ಜಿವರ್ಲ್ಡ್ ನೊಂದಿಗೆ ಮಾತನಾಡಿದ ತೆಂಬರೆ ವಾದ್ಯವೃಂದದ ಐತಪ್ಪ, 'ಹಿಂದೆ, ಆಟಿ ಸಮಯದಲ್ಲಿ ಅನೇಕರು ಬಡತನದಿಂದ ಬಳಲುತ್ತಿದ್ದರಿಂದ ಸಾಕಷ್ಟು ಕಷ್ಟದ ಪರಿಸ್ಥಿತಿ ಇತ್ತು. ಮಳೆಗಾಲದಲ್ಲಿ ಯಾರೂ ಮನೆಯಿಂದ ಹೊರಗೆ ಬರುವುದಿಲ್ಲ ಮತ್ತು ಹೀಗಾಗಿ ಕೃಷಿ ಚಟುವಟಿಕೆಗಳು ಇರಲಿಲ್ಲ' ಎಂದರು.
ಚಕ್ರಪಾಣಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, 'ಆಟಿ ಕಳಂಜ ಜನಪದ ಕಲೆಯು ಹಿಂದಿನಿಂದಲೂ ನಡೆದುಕೊಂಡು ಬಂದಿದೆ' ಎಂದರು.
ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಮಾತನಾಡಿ, 'ಈ ಜಾನಪದಕ್ಕೆ ವೈಜ್ಞಾನಿಕ ಕಾರಣವಿದೆ. ಈ ಸಂಸ್ಕೃತಿಯನ್ನು ಬಹಳ ಹಿಂದಿನಿಂದಲೂ ಆಚರಿಸಲಾಗುತ್ತದೆ' ಎಂದು ಹೇಳಿದರು.
ಇಲ್ಲಿ ಉದಯಕುಮಾರ್ ಆಟಿ ಕಳಂಜನಾಗಿ ಕಂಗೊಳಿಸುತ್ತಿದ್ದಾರೆ. ಸಾಂಪ್ರದಾಯಿಕ ಅಲಂಕಾರ ಮತ್ತು ಉಡುಪಿನಲ್ಲಿ ಆಟಿ ಕಳಂಜ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸುತ್ತಾ ಮನೆ ಮನೆಗೆ ತೆರಳಿ ರೋಗಗಳ ವಿರುದ್ಧ ಕುಟುಂಬಗಳನ್ನು ಆಶೀರ್ವದಿಸುತ್ತಾರೆ. ಜಾನುವಾರುಗಳಿಗೆ ರೋಗಗಳ ವಿರುದ್ಧ ರಕ್ಷಣೆ ಮತ್ತು ಕೀಟಗಳ ವಿರುದ್ಧ ಬೆಳೆಗಳನ್ನು ರಕ್ಷಿಸುವುದಕ್ಕೆ ಆಶೀರ್ವದಿಸುತ್ತದೆ ಎಂಬ ನಂಬಿಕೆ.
ಆಟಿ ಕಳಂಜ ವೇಷ ಧರಿಸಿದವರು ಮನೆಯವರು ನೀಡುವ ಅಕ್ಕಿ, ತೆಂಗಿನಕಾಯಿ, ಅರಿಶಿನ, ಇದ್ದಿಲು ಇತ್ಯಾದಿ ರೂಪದಲ್ಲಿ ಸಂಗ್ರಹಿಸಿ ಮುಂದಿನ ಮನೆಗೆ ಹೊರಡುತ್ತಾರೆ. ಮಳೆಗಾಲದಲ್ಲಿ ನೈಸರ್ಗಿಕ ವಿದ್ಯಮಾನವಾದ ರೋಗಗಳು ಮತ್ತು ಕೀಟಗಳ ಪ್ರತಿಕೂಲ ಹರಡುವಿಕೆಯಿಂದ ಗ್ರಾಮಸ್ಥರು ರಕ್ಷಿಸಲ್ಪಡುತ್ತಾರೆ ಎಂಬ ಮನೋಭಾವದಿಂದ ಇದು ಒಂದು ರೀತಿಯಲ್ಲಿ ಜನರಿಗೆ ಭರವಸೆ ನೀಡುತ್ತದೆ.
ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ ಆಟಿಕಳಂಜನನ್ನು ಇಂದು ಕಾಣಸಿಗುವುದು ಅಪರೂಪ. ಸೊಂಟದ ಸುತ್ತ ತೆಂಗಿನ ಗರಿ, ಕಾಲಿಗೆ ಗಗ್ಗರ, ತಲೆಯಲ್ಲಿ ಅಡಿಕೆ ಹಾಳೆ ಮತ್ತು ಕಿಸ್ಕಾರ ಹೂವಿನಿಂದ ಸಿಂಗರಿಸಿದ ಮುಟ್ಟಾಳೆ, ಮುಖಕ್ಕೆ ಕೆಂಪು ಕಪ್ಪು ಬಿಳಿ ಬಣ್ಣದ ಚುಕ್ಕೆ, ಕೆಂಪು ಬಣ್ಣದ ಕುಪ್ಪಸವನ್ನು ತೊಟ್ಟು ಕೈಯಲ್ಲಿ ತಾಳೆಗರಿಯಿಂದ ಮಾಡಿದ ಕೊಡೆ ಹಿಡಿದು ಕುಣಿಯುತ್ತಾ ಆಟಿಕಳಂಜ ಮನೆ ಮನೆಗೆ ಭೇಟಿ ಕೊಡುತ್ತಾನೆ. ಕಳಂಜನ ಜೊತೆಯಲ್ಲಿ ಪಾಡ್ದನ ಹಾಡುವವರು ಮತ್ತು 'ತೆಂಬರೆ' ಎನ್ನುವ ಚರ್ಮದಿಂದ ಮಾಡಿದ ವಾದ್ಯವನ್ನು ನುಡಿಸುವವರೂ ಇರುತ್ತಾರೆ. ಇವರ ತಾಳಕ್ಕೆ ತಕ್ಕಂತೆ ಆಟಿಕಳಂಜ ಹೆಜ್ಜೆ ಹಾಕುತ್ತಾನೆ.
ಕೆಲವು ವರ್ಷಗಳ ಹಿಂದೆ ತುಳುನಾಡಿನ ಬಹುತೇಕ ಪ್ರತಿ ಹಳ್ಳಿಗಳಲ್ಲಿ ಆಚರಣೆಯಲ್ಲಿದ್ದ ಆಟಿ ಕಳಂಜ ಇಂದು ಅಳಿವಿನಅಂಚಿನಲ್ಲಿದೆ. ಜನಪದ ನಂಬಿಕೆ ಮತ್ತು ನಿಸರ್ಗ ಮತ್ತು ಪರಿಸರದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಜಾನಪದವನ್ನುಆಧರಿಸಿದ ಈ ಜಾನಪದಕ ಲಾಪ್ರಕಾರವನ್ನು ಪುನರುಜ್ಜೀವನಗೊಳಿಸಲು ಸಂಘಟಿತ ಪ್ರಯತ್ನಗಳ ಅಗತ್ಯ.