ಉಡುಪಿ, ಜು 27 (DaijiworldNews/MS): ವಾರದ ಹಿಂದೆ ನಗರದ ಪ್ಯಾರಾ ಮೆಡಿಕಲ್ ಕಾಲೇಜೊಂದರ ಶೌಚಾಲಯದಲ್ಲಿ ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂಬ ಘಟನೆಗೆ ಸಂಬಂಧಪಟ್ಟಂತೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರಾದ ಶಬನಾಝ್, ಅಲ್ಫೀಯಾ, ಅಲೀಮಾ ಈ ಮೂವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಮಾಡಿ ಡಿಲಿಟ್ ಆದ ಬಗ್ಗೆ ಮೂವರು ವಿದ್ಯಾರ್ಥಿನಿಯರು ಮತ್ತು ಕಾಲೇಜು ಆಡಳಿತ ಮಂಡಳಿಯವರ ವಿರುದ್ಧ ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ಕೃತ್ಯ, ವ್ಯಕ್ತಿಯ ಖಾಸಗಿ ಚಿತ್ರವನ್ನು ಚಿತ್ರೀಕರಿಸುವ ಕೃತ್ಯ, ಮಾಹಿತಿಯನ್ನು ಮತ್ತು ದಸ್ತಾವೇಜನ್ನು ಹಾಜರುಪಡಿಸಲು ತಪ್ಪುವ ಕೃತ್ಯದ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ 509, 204, 175,34, ಮತ್ತು 66(ಇ) ಅಡಿ ದೂರು ದಾಖಲಾಗಿದೆ
ವಿವಾದವೇನು?
ಉಡುಪಿಯ ಕಾಲೇಜೊಂದರ ಟಾಯ್ಲೆಟ್ನಲ್ಲಿ ಮೂವರು ವಿದ್ಯಾರ್ಥಿನಿಯರಿಂದ ಭಿನ್ನ ಕೋಮಿಗೆ ಸೇರಿದ ಯುವತಿಯ ಚಿತ್ರೀಕರಣ ಮಾಡಲಾಗಿತ್ತು. " ಕಾಲೇಜಿನ 3 ಮಂದಿ ವಿದ್ಯಾರ್ಥಿನಿಯರು ಕ್ಯಾಮರದ ಮೂಲಕ ಇನ್ನೊಬ್ಬ ವಿದ್ಯಾರ್ಥಿನಿಯನ್ನು ಅಸಭ್ಯವಾಗಿ ಚಿತ್ರೀಕರಿಸಿದ್ದರು. ಇದು ಕಾಲೇಜಿನ ಗಮನಕ್ಕೆ ಬಂದು ಆರೋಪಿ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿದೆ . ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿರುವ 3 ಮಂದಿ ವಿದ್ಯಾರ್ಥಿನಿಯರು ತಪ್ಪೊಪ್ಪಿಕೊಂಡಿದ್ದಾರೆ. ತಮಾಷೆಗಾಗಿ ವೀಡಿಯೋ ಮಾಡಿರುವುದಾಗಿ ಮೂವರು ಲಿಖಿತವಾಗಿ ಹೇಳಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಘಟನೆ ಬಗ್ಗೆ ಸ್ಪಷ್ಟನೆ ನೀಡಿತ್ತು.
ಮತ್ತೊಂದು ಎಫ್ ಐ ಆರ್ ದಾಖಲು:
ಈ ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಿಸಿ ಪಾರ್ವಡ್್ರ ಮಾಡಿರುತ್ತಾರೆ ಎಂದು ಎಡಿಟ್ ಮಾಡಿದ ವಿಡಿಯೋ ವನ್ ಇಂಡಿಯಾಕನ್ನಡಯೂ-ಟ್ಯೂಬ್ ಚಾನಲ್ನಲ್ಲಿ ಅಪ್ಲೋಡ್ ಆಗಿದ್ದು ಅದನ್ನು ಕಾಲು ಸಿಂಗ್ ಚೌಹಾಣ್ ಎಂಬ ವ್ಯಕ್ತಿ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಅಕ್ಷೇಪಾರ್ಹ ಸುಳ್ಳುಸುದ್ದಿ ಹಬ್ಬಿಸುತ್ತಿರುವುದು ಕಂಡು ಬಂದಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಕೋಮು ದ್ವೇಷ ಉಂಟು ಮಾಡಿ ಸೌಹಾರ್ಧತೆಗೆ ಭಾದಕವಾಗುವ ಕೃತ್ಯದ ಅಡಿಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ಸ್ವಯಂಪ್ರೇರಿತ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.