ಮೂಡುಬಿದಿರೆ, ಎ04(SS): ಕಾಂಗ್ರೆಸ್ ಎಂದರೆ ಹಿಂಸೆ, ಬಿಜೆಪಿ ಎಂದರೆ ಅಹಿಂಸೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಂಬುದು ಭ್ರಷ್ಟಾಚಾರದ ಪರ್ಯಾಯ ಪದ. ಕಾಂಗ್ರೆಸ್ ಎಂದರೆ ಹಿಂಸೆ, ಬಿಜೆಪಿ ಎಂದರೆ ಅಹಿಂಸೆಯಾಗಿದೆ. ದೇಶದಲ್ಲಿ ನೋಟು ಅಮಾನ್ಯದ ಬಳಿಕ ಕಪ್ಪುಹಣ ನಿಯಂತ್ರಣಕ್ಕೆ ಬಂದಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗಿದೆ. ಈ ಹಿಂದೆ ಜಾತಿ-ಮತಗಳ ಆಧಾರದಲ್ಲಿ ಮೀಸಲಾತಿ ಇದ್ದರೆ ಈಗ ಆರ್ಥಿಕವಾಗಿ ಹಿಂದುಳಿದವರಿಗೂ ಸೂಕ್ತ ಮೀಸಲಾತಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮಂಗಳೂರಿನಲ್ಲಿರುವ ಬಜಪೆ ವಿಮಾನ ನಿಲ್ದಾಣ ಹೊಸತನಗಳೊಂದಿಗೆ ಬದಲಾವಣೆಗೊಳ್ಳುತ್ತಿದ್ದು 2014-18ರ ವರೆಗೆ 296.91 ಕೋಟಿ ರೂ. ಅನುದಾನ ಬಂದಿದೆ; ನವಮಂಗಳೂರು ಬಂದರು ವಿಸ್ತರಣೆಯಾಗುತ್ತಿದೆ. ತೆಂಗು ಪಾರ್ಕ್, ಪ್ಲಾಸ್ಟಿಕ್ ಪಾರ್ಕ್, ಮೀನುಗಾರಿಕಾ ಜೆಟ್ಟಿ, ಸ್ಮಾರ್ಟ್ ಸಿಟಿ, ಅಮೃತ ಯೋಜನೆ ಕಾರ್ಯಗತಗೊಳ್ಳಲಿವೆ’ ಎಂದು ನಳಿನ್ ಕುಮಾರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಸರಕಾರದಿಂದ 5 ವರ್ಷಗಳಲ್ಲಿ 16,505 ಕೋಟಿ ರೂ. ಅನುದಾನ ಬಂದಿದೆ. ರಾ.ಹೆ. ಪ್ರಾಧಿಕಾರದ ಮೂಲಕ 7,318 ಕೋಟಿ ರೂ., ವಿವಿಧ ರಸ್ತೆ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗಳು 5,413 ಕೋ.ರೂ. ವೆಚ್ಚದಲ್ಲಿ ಸಾಕಾರಗೊಳ್ಳುತ್ತಿವೆ ಎಂದು ತಿಳಿಸಿದರು.
14ನೇ ಹಣಕಾಸು ಯೋಜನೆಯಡಿ ಜಿಲ್ಲೆಯ ನಗರ ಪಂಚಾಯತ್ಗಳಿಗೆ 41.12 ಕೋಟಿ ರೂ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ 713 ಕಾಮಗಾರಿಗಳಿಗೆ 22.50 ಕೋಟಿ ರೂ. ಅನುದಾನ ನೀಡಲಾಗಿದೆ. ಗ್ರಾಮೀಣ ರಸ್ತೆಗಳನ್ನು ಗುಣಮಟ್ಟದಲ್ಲಿ ನಿರ್ಮಿಸಲು ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ ದ.ಕ. ಜಿ.ಪಂ.ಗೆ 64 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.