ಮಂಗಳೂರು, ಜು 25(DaijiworldNews/SM): ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ ವಾಮಂಜೂರು ತಿರುವೈಲ್ ಕೆಲರಾಯಿ ಎರಡನೇ ಅಡ್ಡ ರಸ್ತೆಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಸ್ಥಳೀಯ ನಿವಾಸಿಗಳಿಗೆ ಮನೆಗಳು ಕುಸಿಯುವ ಆತಂಕ ಶುರುವಾಗಿದೆ.
ಈ ಹಿಂದೆ ಮಳೆಗಾಲದಲ್ಲಿ ಗುಡ್ಡ ಕುಸಿತವುಂಟಾಗಿತ್ತು. ಇದೀಗಾ ಮತ್ತೆ ಕುಸಿತಗೊಂಡು ಸ್ಥಳೀಯರಿಗೆ ಮನೆಗಳೇ ನಾಶವಾಗಬಹುದಾದ ಆತಂಕ ಎದುರಾಗಿದೆ. ಗುಡ್ಡದ ಮೇಲಿರುವ ಎರಡು ಮನೆಗಳು ಅಪಾಯದ ಅಂಚಿನಲ್ಲಿ ಜೀವನ ಸಾಗಿಸುವ ದುಸ್ಥಿತಿ ಎದುರಾಗಿವೆ. ಇನ್ನು ಈ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರೆ, ಕೇವಲ ಭರವಸೆಗಳನ್ನಷ್ಟೇ ನೀಡುತ್ತಿದ್ದಾರೆ ಎಂಡು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಮನಪ ಸದಸ್ಯೆ ಬಂದು ನೋಡಿ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಈ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ. ನಿತ್ಯ ಭಯದಲ್ಲಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳು ಬಂದು ಮನೆ ಕಾಲಿಮಾಡಿ ಸರ್ಕಾರಿ ಶಾಲೆಯಲ್ಲಿ ಇರಲು ಹೇಳುತ್ತಾರೆ. ಆದರೆ, ಶಾಶ್ವತ ಪರಿಹಾರ ನೀಡಲು ಯಾವುದೇ ಕ್ರಮಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗದಿರುವುದು ಜನಸಾಮಾನ್ಯರನ್ನು ಆತಂಕದ ಕೂಪಕ್ಕೆ ದೂಡಿದಂತಾಗಿದೆ.
ಇದೇ ರೀತಿ ಎಷ್ಟು ದಿನಗಳ ಕಾಲ ನಾವು ಶಾಲೆಗಳಿಗೆ ಸ್ಥಳಾಂತರಗೊಳ್ಳಬೇಕು? ನಮಗೆ ಶಾಶ್ವತ ಪರಿಹಾರ ಇಲ್ಲವೇ ಎಂಬುವುದು ಸ್ಥಳಿಯರ ಪ್ರಶ್ನೆಯಾಗಿದ್ದು, ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಾಗಿದೆ.