ಸುರತ್ಕಲ್, ಜು 25 (DaijiworldNews/AK): ಹೊಸಬೆಟ್ಟು ಬಳಿ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಮಳಿಗೆಯಿಂದ ಎರಡು ಕಾರು , ಮೊಬೈಲ್, ಪ್ರಿಂಟರ್ ಸಹಿತ ವಸ್ತುಗಳನ್ನು ಕದ್ದ ಆರೋಪಿ ಕಿನ್ನಿಪದವು ನಿವಾಸಿ ಮಹಮ್ಮದ್ ಶಫೀಕ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ವಶ ಪಡಿಸಿಕೊಂಡಿರುವ ವಾಹನಗಳ ಒಟ್ಟು ಮೌಲ್ಯ ಅಂದಾಜು 15.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ಕೃತ್ಯಕ್ಕೆ ಬಳಸಿದ ಸಲಕರಣೆ, ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.
ಜುಲೈ 12ರಂದು ರಾತ್ರಿ ಹೊಸಬೆಟ್ಟಿನ ಕಾರ್ ಮಾರ್ಟ್ ಎಂಬ ಹೆಸರಿನ ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ಶೋರೂಂಗೆ ದ್ವಿ ಚಕ್ರದಲ್ಲಿ ಬಂದ ಕಳ್ಳರು ಶೋರೂಂನ ಕಛೇರಿಯ ಗ್ಲಾಸ್ ನ ಡೋರ್ ನ್ನು ಸುತ್ತಿಗೆಯಿಂದ ಜಖಂಗೊಳಿಸಿ ಒಳಪ್ರವೇಶಿಸಿ , ಮೊಬೈಲ್ ಫೋನ್, ಲ್ಯಾಪ್ ಟಾಪ್, ಪ್ರಿಂಟರ್ ಹಾಗೂ ಶೋರೂಂನ ಪಾರ್ಕ ನಲ್ಲಿ ನಿಲ್ಲಿಸಿದ ಕ್ರೆಟಾ, ಸ್ವಿಫ್ಟ್ ಕಾರು ಕಳವು ಮಾಡಿದ್ದು ಸಿಸಿಟಿವಿ ಸೆರೆಯಾಗಿತ್ತು.ಕಾರ್ ಮಾರ್ಟ್ ಮಾಲಕರಾದ ಅಬೀದ್ ಅಹಮ್ಮದ್ ಸೂರಲ್ಪಾಡಿ ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಳವಾದ ಕಾರಉಗಳ ಪತ್ತೆಗಾಗಿ ಪೊಲೀಸರು ಜುಲೈ ೨೨ ರಂದು ವಾಹನ ತಪಾಸಣೆ ನಡೆಸುತ್ತಿದ್ದಾಗ ಯುವಕನೊಬ್ಬ ಕಾರು ಚಲಾಯಿಸಿಕೊಂಡು ಬಂದು ಸಿಕ್ಕಿಬಿದ್ದಿದ್ದ. ತಪಾಸಣೆ ವೇಳೆ ಕಳವಾದ ಕಾರು ಎಂದು ತಿಳಿದು ಬಂದಿದೆ. ಈತನ ಮೇಲೆ ಮೂಡಬಿದ್ರೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಗೈದ ಪ್ರಕರಣವಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮೂರು ದಿನ ಕಸ್ಟಡಿಗೆ ಪಡೆಯಲಾಗಿದೆ. ಹಿರಿಯ ಆಧಿಕಾರಿಗಳ ಮಾರ್ಗದರ್ಶನದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ರವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.