ಕುಂದಾಪುರ, ಏ 04(MSP) : ಕೋಟಿಗಟ್ಟಲೆ ಹಣದ ಆಮೀಷವನ್ನು ಒಡ್ಡಿ ಶಾಸಕರ ಖರೀದಿಗೆ ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರ ಬಳಿ ಇರುವ ಕೋಟ್ಯಾಂತರ ರೂಪಾಯಿ ಕಪ್ಪು ಹಣದ ಮೂಲವನ್ನು ತನಿಖೆ ನಡೆಸಲು ಕೇಂದ್ರ ಸರ್ಕಾರದ ಏಜೆನ್ಸಿಗಳಿಗೆ ಯಾಕೆ ಸಾಧ್ಯವಾಗುತ್ತಿಲ್ಲ? ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕುಂದಾಪುರದ ನೆಹರೂ ಮೈದಾನದಲ್ಲಿ ಬುಧವಾರ ಸಂಜೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರವಾಗಿ ನಡೆದ ಮಹಿಳಾ ಮೀನುಗಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಗೆ ಬಂದಿರುವ 1027 ಕೋಟಿ ಮೌಲ್ಯದ ಕಾರ್ಪೋರೇಟ್ ಬಾಂಡ್ಗಳಲ್ಲಿ ಅನಾಮಧೇಯ ಹೆಸರಿನಲ್ಲಿರುವ ೫೫೦ ಕೋಟಿ ದೇಣಿಗೆಯ ಮೂಲ ಯಾವುದು ಎನ್ನುವುದನ್ನು ಭ್ರಷ್ಟಾಚಾರ ವಿರೋಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತದಾರರ ಮುಂದಿಡಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬರೀ ಸುಳ್ಳು ಆಶ್ವಾಸನೆಗಳನ್ನೇ ಕೊಟ್ಟು 2014 ರ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಹಿಡಿದ ಮೋದಿ ನೇತೃತ್ವದ ಬಿಜೆಪಿ ಒಂದೇ ಒಂದು ಆಶ್ವಾಸನೆಯನ್ನೂ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ, ನೋಟು ರದ್ದತಿ, ಜಿಎಸ್ಟಿ ಜಾರಿ ಮುಂತಾದ ಅವೈಜ್ಞಾನಿಕ ತೀರ್ಮಾನಗಳಿಂದ ದೇಶದ ಸಾಮಾನ್ಯ ಜನರ ಬದಕನ್ನು ಅತಂತ್ರಗೊಳಿಸಿದ್ದಲ್ಲದೇ, ಪರೋಕ್ಷವಾಗಿ ಕಪ್ಪುಹಣದ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ದೇಶ ಕಾಯುವ ಸೈನಿಕರ ತ್ಯಾಗ, ಬಲಿದಾನಗಳನ್ನು ತಮ್ಮ ಹೆಸರಿನೊಂದಿಗೆ ಸೇರ್ಪಡೆಗೊಳಿಸುವಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದು ಆರೋಪಿಸಿದರು.
ದೇಶಕ್ಕೆ ನಿರ್ದಿಷ್ಠ ಕಾರ್ಯಕ್ರಮವನ್ನು ನೀಡದ ಮೋದಿ ಇನ್ನೊಮ್ಮೆ ಪ್ರಧಾನಿಯಾಗಲು ಸಾಧ್ಯವೇ ಇಲ್ಲ. ಬೆಂಗಳೂರನ್ನು ಹೊರತು ಪಡಿಸಿದರೆ ವಾಣಿಜ್ಯ ಬೆಳವಣಿಗೆಯನ್ನು ಕಾಣುತ್ತಿರುವ ಕರಾವಳಿ ಭಾಗದಲ್ಲಿ ರಾಜಕೀಯ ಕಾರಣಕ್ಕಾಗಿ ಕೋಮು ದ್ವೇಷಗಳನ್ನು ಬೆಳೆಸಲಾಗುತ್ತಿದೆ. ನಮ್ಮ ಯುವ ಸಮುದಾಯ ಇಂತಹ ಆಮೀಷಗಳಿಗೆ ಒಳಗಾಗ ಬಾರದು. ಎಂದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಶಾಂತಿ ಕಾಪಾಡುವ ಬದ್ದತೆಯನ್ನು ಸರ್ಕಾರ ತೋರಿದೆ ಎಂದ ಅವರು ಒಂದು ಪೂರ್ಣ ಅವಧಿಯ ಲೋಕಸಭಾ ಸದಸ್ಯರಾಗಿ ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸದ ಇಲ್ಲಿನ ಹಾಲಿ ಬಿಜೆಪಿ ಅಭ್ಯರ್ಥಿಗೆ ಮತದಾರರು ಈ ಬಾರಿ ಸರಿಯಾದ ಪಾಠ ಕಲಿಬೇಕಾಗಿದೆ ಎಂದರು.
ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಾತನಾಡಿ, ಎನ್ಡಿಎ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕತೆ ಕುಗ್ಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೃತ ಮೀನುಗಾರರಿಗೆ ನೀಡುವ ಪರಿಹಾರ ಮೊತ್ತವನ್ನು 6 ಲಕ್ಷಕ್ಕೆ ಏರಿಸಿರುವುದು ಸೇರಿದಂತೆ ಮೀನುಗಾರರಿಗಾಗಿ ಹಲವು ಯೋಜನೆಗಳನ್ನು ತರಲಾಗಿದೆ. ಇತ್ತೀಚೆಗೆ ಕಾಣೆಯಾದ 7 ಮಂದಿ ಮೀನುಗಾರರ ಪತ್ತೆಯ ವಿಚಾರವೂ ಸೇರಿ, ಮೀನುಗಾರರ ಸಂಕಷ್ಟಗಳಿಗೆ ಮೋದಿ ಸರ್ಕಾರದಿಂದ ಯಾವುದೆ ರೀತಿಯ ಸ್ಪಂದನೆ ದೊರಕಿಲ್ಲ ಎಂದು ಆರೋಪಿಸಿದರು.
ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿ ವರ್ಷ ಕಳೆದಿದ್ದರೂ, ಇನ್ನೂ ಪ್ರಕರಣದ ನಿಗೂಢತೆ ಯಾಕೆ ಬಯಲಾಗಿಲ್ಲ ಎನ್ನುವುದನ್ನು ಬಿಜೆಪಿ ರಾಜ್ಯದ ಜನತೆಗೆ ಉತ್ತರಸಿಬೇಕು ಎಂದು ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ರಾಮ ಮಂದಿರ ನಿರ್ಮಾಣಕ್ಕಾಗಿ ಭಕ್ತಿಯಿಂದ ಇಟ್ಟಿಗೆ ಹೊತ್ತವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು. ಮಂದಿರದ ಹೆಸರಿನಲ್ಲಿ ಹಣ ಸಂಗ್ರಹಿಸಿದವರು ಬಿಜೆಪಿ ಹಾಗೂ ಸಂಘಟನೆಯ ಪ್ರಮುಖರು. ಅಂದು ಸಂಗ್ರಹಿಸಿದ ಹಣ ಏನಾಯ್ತು? ಇಟ್ಟಿಗೆ ಎಲ್ಲಿಗೆ ಹೋಯ್ತು ಎನ್ನುವ ಸತ್ಯವನ್ನು ಬಿಜೆಪಿ ತಿಳಿಸಲಿ ಎಂದು ಯು.ಆರ್.ಸಭಾಪತಿ ಹೇಳಿದರು.
ಸಚಿವೆ ಡಾ.ಜಯಮಾಲ, ಯು.ಆರ್.ಸಭಾಪತಿ ಮಾತನಾಡಿದರು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಬ್ಲೋಸಂ ಫೆರ್ನಾಂಡಿಸ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಎರಡು ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ವಿಕಾಸ ಹೆಗ್ಡೆ, ದಿನೇಶ್ ಪುತ್ರನ್, ನರಸಿಂಹ ಮೂರ್ತಿ, ಬಿ.ಹಿರಿಯಣ್ಣ, ಜ್ಯೋತಿ ಪುತ್ರನ್, ಮಾಣಿ ಗೋಪಾಲ, ಶಂಕರ್ ಕುಂದರ್, ಮದನ್ ಕುಮಾರ್, ಸಬ್ಲಾಡಿ ಮಂಜಯ್ಯ ಶೆಟ್ಟಿ, ಶಾಲಿನಿ ಶೆಟ್ಟಿ, ಹುಸೇನ್ ಹೈಕಾಡಿ, ಕಿಶೋರ್ ಕುಮಾರ್, ಶ್ರೀಕಾಂತ ಅಡಿಗ, ಕೆದೂರು ಸದಾನಂದ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಹರಿಪ್ರಸಾದ್ ಶೆಟ್ಟಿ, ಸಂದೇಶ್ ಭಟ್, ಮನ್ಸೂರು ಇಬ್ರಾಹಿಂ, ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ಅನಿತಾ ಶೆಟ್ಟಿ, ದೇವಾನಂದ ಶೆಟ್ಟಿ, ಎಸ್.ರಾಜು ಪೂಜಾರಿ, ಮೋಗವೀರ ಸಂಘಟನೆ ಜಯ ಕೋಟ್ಯಾನ್, ಕೆ.ಕೆ. ಕಾಂಚನ್, ಮೀನುಗಾರರ ಸಂಘದ ರತ್ನಾ ದಿನೇಶ್ ಪುತ್ರನ್, ಕಾಂಗ್ರೆಸ್ ಐಟಿ ಸೆಲ್ನ ಚಂದ್ರಶೇಖರ್ ಶೆಟ್ಟಿ, ಮನೋಜ್, ಚಂದ್ರ ಅಮೀನ್, ಇಚ್ಚಿತಾರ್ಥ ಶೆಟ್ಟಿ ಇದ್ದರು.
ತಡವಾದ ಕಾರ್ಯಕ್ರಮ - ಎದ್ದು ಹೋದ ಜನ:
ಮುಖ್ಯಮಂತ್ರಿ ಕುಮಾರಸ್ವಾಮಿ ಬುಧವಾರ ಸಂಜೆ 5.30ಕ್ಕೆ ಕುಂದಾಪುರದಲ್ಲಿ ಚುನಾವಣಾ ಪ್ರಚಾರ ನಡೆಸಲು ಆಗಮಿಸುತ್ತಾರೆ ಎಂದು ಸಮಯ ನಿಗಧಿಯಾಗಿತ್ತು. ಅದರಂತೆ ಸಾವಿರಾರು ಜನ ನೆಹರೂ ಮೈದಾನದಲ್ಲಿ ಸೇರಿದ್ದರು. ಆದರೆ ಕುಮಾರ ಸ್ವಾಮಿ ಕುಂದಾಪುರಕ್ಕೆ 7.25ಕ್ಕೆ ಅಂದರೆ ಎರಡು ಗಂಟೆಗಳ ಕಾಲ ತಡವಾದ ಹಿನ್ನೆಲೆಯಲಿ ಕುಮಾರಸ್ವಾಮಿ ಭಾಷಣ ಆಲಿಸಲು ಆಗಮಿಸಿದ್ದವರಲ್ಲಿ ಬಹುತೇಕರು ಎದ್ದು ಹೋಗಲಾರಂಭಿಸಿದ್ದರು.
ರಾಜ್ಯ ಕಾಂಗ್ರೆಸ್ ಮುಖಂಡ ಎಂ.ಎ. ಗಫೂರ್ ಸ್ವಾಗತಿಸಿದರು. ಮಾಜಿ ಶಾಸಕ ಯು.ಆರ್. ಸಭಾಪತಿ ನಿರೂಪಿಸಿದರು.