ಕುಂದಾಪುರ, ಜು, 24 (DaijiworldNews/AK): ಮಣಿಪುರದಲ್ಲಿ ಕುಕಿ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಮಹಿಳೆಯರ ಅತ್ಯಾಚಾರ, ಕೊಲೆಗಳನ್ನು ಖಂಡಿಸಿ ಕಾರ್ಮಿಕ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು, ಜನವಾದಿ ಮಹಿಳಾ ಸಂಘಟನೆ,ರೈತ ಸಂಘದ ಕಾರ್ಯಕರ್ತರು ಸೇರಿದಂತೆ ಅನೇಕರು ಭಾಗವಹಿಸಿದರು ಮಣಿಪುರ ಮಹಿಳೆಯ ಬೆತ್ತಲೆ ಮೆರವಣಿಗೆ ಖಂಡಿಸಿ ಪ್ರತಿಭಟಿಸಿದರು.
ಬಳಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಸಂಚಾಲಕ ಚಂದ್ರಶೇಖರ ವಿ ,ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಬಿರೇನ್ ಸಿಂಗ್ ಸರ್ಕಾರ ಬಹುಸಂಖ್ಯಾತರನ್ನು ಓಲೈಸುವ ರಾಜಕಾರಣದಿಂದಾಗಿ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮೈತೇಹಿ ಕುಕಿ ಸಮುದಾಯದ ಜನರ ಮಧ್ಯೆ ವೈಷಮ್ಯ ಬೆಳೆದು ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ಬಹಿರಂಗ ಅತ್ಯಾಚಾರ ನಡೆಯುತ್ತಿದೆ. ಕೊಲೆಗಳು,ದೊಂಬಿಗಳು ನಡೆಯುತ್ತಿದ್ದರೂ ಬಿಜೆಪಿ ರಾಜ್ಯ ಸರ್ಕಾರ ಗಲಭೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದರು.
ಕಳೆದ ಸುಮಾರು ತಿಂಗಳಿಂದ ಗಲಭೆಗಳು ನಡೆಯುತ್ತಿರುವ ಮಾಹಿತಿ ಇದ್ದರೂ ಪ್ರಧಾನ ಮಂತ್ರಿಗಳು ಮಾತನಾಡದಿರುವುದು ದುರಂತವಾಗಿದೆ ಕೂಡಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ವಜಾ ಮಾಡಿ ಕಾನೂನು ಸುವ್ಯವಸ್ಥೆ ಮರುಸ್ಥಾಪನೆ ಸಿಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ ಎಚ್ ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿ ,ಬೆತ್ತಲೆ ಮೆರವಣಿಗೆ ಹಾಗೂ ಬಿಜೆಪಿ ವಿಭಜನಕಾರಿ ನೀತಿಗಳು ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿ ಖಂಡಿಸಿದರು.
ಸಿಐಟಿಯು ಹಿರಿಯ ಮುಖಂಡ ಕೆ ಶಂಕರ್, ಜನವಾದಿ ಮಹಿಳಾ ಸಂಘಟನೆ ನಾಯಕಿ ಶೀಲಾವತಿ ಪಡುಕೋಣೆ,ಬಲ್ಕೀಸ್, ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಮೇಶ ವಿ, ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ,ರವಿ ವಿ ಎಂ,ಕಟ್ಟಡ ಕಾರ್ಮಿಕರ ಸಂಘಟನೆಯ ಸಂತೋಷ ಹೆಮ್ಮಾಡಿ ಮೊದಲಾದವರು ಹಾಜರಿದ್ದರು.