ಮಂಗಳೂರು, ಜು 24 (DaijiworldNews/HR): ಕೊಂಕಣಿ ಸಂಗೀತ ಲೋಕದ ಪ್ರಸಿದ್ಧ ಗಾಯಕ, ಗೀತರಚನೆಕಾರ ಮತ್ತು ಸಂಯೋಜಕ ಕ್ಲೋಡ್ ಡಿ'ಸೋಜಾ(67) ಅವರು ಜುಲೈ 24ರ ಸೋಮವಾರದಂದು ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.
ಸುಮಾರು 61 ಸಂಗೀತ 'ನೈಟ್ಸ್' ಗಳನ್ನು ಪ್ರಸ್ತುತ ಪಡಿಸಿರುವ ಕ್ಲೋಡ್ ಡಿಸೋಜಾ ಅವರು ಗಾಯಕ ಮಾತ್ರವಲ್ಲದೆ ಡ್ರಮ್ಸ್ ಮತ್ತು ಗಿಟಾರ್ನಂತಹ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು.
ಇನ್ನು ಕ್ಲೋಡ್ ಅವರು ಬರಹಗಾರ, ನಿರ್ದೇಶಕ ಮತ್ತು ನಟರಾಗಿ ಸಾಧನೆ ಮಾಡಿದ್ದು, ಸಾಮಾಜಿಕ, ಐತಿಹಾಸಿಕ ಮತ್ತು ಧಾರ್ಮಿಕ ವಿಷಯಗಳ ಮೇಲೆ 40 ಕ್ಕೂ ಹೆಚ್ಚು ಕೊಂಕಣಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ.
ಕ್ಲೌಡ್ ಅವರು 15 ಸಂಗೀತ ಸಿಡಿಗಳನ್ನು ಬಿಡುಗಡೆಗೊಳಿಸಿದ್ದು, ಇತರ ಕಲಾವಿದರ ಆಲ್ಬಮ್ಗಳಿಗೆ ರಿದಮ್ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು ಕ್ಲೋಡ್ ಅವರ ಧ್ವನಿ ಮತ್ತು ಧಾರ್ಮಿಕ ನಾಟಕಗಳಿಗೆ 'ಸಂದೇಶ ಪ್ರಶಸ್ತಿ' ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಮತ್ತು ಪ್ರಶಸ್ತಿಗಳು ಲಭಿಸಿದೆ.
ಈ ಬಹುಮುಖ ಪ್ರತಿಭೆಯ ಕಲಾವಿದನನ್ನು ಕಳೆದುಕೊಂಡ ಕೊಂಕಣಿ ಸಂಗೀತ ಲೋಕ ಸಂತಾಪ ವ್ಯಕ್ತಪಡಿಸಿದೆ.