ಬಂಟ್ವಾಳ, ಜು 23 (DaijiworldNews/AK): ಕೆದಿಲ ಗ್ರಾಮದ ಕಾಂತುಕೋಡಿಯ ಮುಳುಗು ಸೇತುವೆಯೊಂದರಲ್ಲಿ ಚಾಲಕ ಪಿಕಪ್ ಚಲಾಯಿಸಿ ನಡು ನೀರಿನಲ್ಲಿ ಸಿಲುಕಿ ಹಾಕಿಕೊಂಡಿರುವ ಘಟನೆ ನಡೆದಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾಂತುಕೋಡಿ -ಪಡೀಲಿಗೆ ಸಂಪರ್ಕ ಮಾಡುವ ರಸ್ತೆಯ ಕಾಂತುಕೋಡಿ ಎಂಬಲ್ಲಿನ ಸೇತುವೆಯೊಂದು ಸಂಪೂರ್ಣ ಮುಳುಗಡೆಯಾಗಿದೆ.
ಈ ಸೇತುವೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರೂ ಪಿಕಪ್ ಚಾಲಕ ತಮ್ಮ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದು ಸೇತುವೆಯ ಮಧ್ಯದಲ್ಲಿ ಸಿಲುಕಿಕೊಂಡಿದ್ದಾರೆ. ಕೂಡಲೇ ಎಚ್ಚೆತ್ತ ಸ್ಥಳೀಯರು ವಾಹನದಲ್ಲಿದ್ದವರ ರಕ್ಷಣೆ ಮಾಡಿದ್ದಾರೆ. ಪಿಕಪ್ ವಾಹನವು ಪಡೀಲು ಭಾಗದಿಂದ ಕೆದಿಲ ಭಾಗಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.
ಸೇತುವೆ ಮಳೆಗಾಲದಲ್ಲಿ ನಿತ್ಯ ನಿರಂತರವಾಗಿ ಮುಳುಗಡೆಯಾಗುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.