ಮಂಗಳೂರು, ಜು 22 (DaijiworldNews/MS): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಶುಕ್ರವಾರ ದ.ಕ.ಜಿಲ್ಲೆಯಲ್ಲಿ ಸ್ಪಂದನ ವ್ಯಕ್ತವಾಗಿದ್ದು. 'ಗ್ರಾಮ ಒನ್ ಕೇಂದ್ರ'ಗಳಲ್ಲಿ ಕಳೆದೆರಡು ದಿನಗಳಲ್ಲಿ 8095 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಮೊದಲ ದಿನವಾದ ಗುರುವಾರ ಸರ್ವರ್ ಸಮಸ್ಯೆಯಿಂದ ದ.ಕ.ಜಿಲ್ಲೆಯಲ್ಲಿ ಕೇವಲ 1,217 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿತ್ತು.
ಎರಡನೇ ದಿನವಾದ ಶುಕ್ರವಾರ ಸರ್ವರ್ ಡೌನ್ ಆಗಿದ್ದರೂ ಕೂಡ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿವೆ. ಜಿಲ್ಲೆಯ 223 ಗ್ರಾಪಂ, 60 ಸ್ಥಳೀಯ ಸಂಸ್ಥೆಗಳು, 179 ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಕೆಲವು ಕಡೆಹಲವು ನೋಂದಣಿ ಕೇಂದ್ರಗಳಲ್ಲಿ ಬೆಳಗ್ಗೆಯೇ ಸಾರ್ವಜನಿಕರು ಸಾಲಿನಲ್ಲಿ ನಿಂತಿದ್ದರು. ಆದರೆ ಸರ್ವರ್ ಸಮಸ್ಯೆ ಹಾಗೂ ಕೆ ವೈಸಿ ಆಪ್ ಡೇಟ್ ಆಗದೇ ಸಮಸ್ಯೆ ಉಂಟು ಮಾಡುತ್ತಿತ್ತು ಇದರಿಂದ ಮಹಿಳೆಯರು ಪಂಚಾಯತ್ ಸಿಬ್ಬಂದಿ ಮೇಲೆ ಆಕ್ರೋಶ ತೋರುತ್ತಿರುವುದು ಕಂಡು ಬಂತು. ತಾಂತ್ರಿಕ ಸಮಸ್ಯೆಯನ್ನು ಮಹಿಳೆಯರಿಗೆ ಮನವರಿಕೆ ಮಾಡಲು ಆಗದೇ ಸಿಬ್ಬಂದಿ ಹೈರಾಣಾಗುವುದು ಸಾಮಾನ್ಯವಾಗಿತ್ತು.