ಕುಂದಾಪುರ, ಜು 21 (DaijiworldNews/SM): ಕೀರ್ತಿ ಪಾಮ್ವಿಲ್ಲೆ ಉಡುಪಿ ಪ್ರಸ್ತುತಪಡಿಸುವ ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ ಆಯೋಜಿಸಿರುವ ಬಹು ನಿರೀಕ್ಷಿತ "ಕುಂದಾಪುರ ಕನ್ನಡ ಹಬ್ಬ" 2023 ರ ಜುಲೈ 23 ರ ಭಾನುವಾರದಂದು ಇಲ್ಲಿ ಬಂಟ್ ಅಸೋಸಿಯೇಶನ್ ಅತ್ರಿಗುಪ್ಪೆ ಬೆಂಗಳೂರಿನಲ್ಲಿ ನಡೆಯಲಿದೆ.
ಕರಾವಳಿಯ ಕುಂದಗನ್ನಡಿಗರು ತಮ್ಮ ಭಾಷೆ-ಬದುಕಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ ‘ವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನ’ವನ್ನು ಆಚರಣೆ ಮಾಡುತ್ತಿದ್ದಾರೆ. ಈ ಪ್ರಯುಕ್ತ ರಾಜಧಾನಿ ಬೆಂಗಳೂರಿನಲ್ಲಿ ಈ ಸಲ ಜು. 23ರಂದು ದಿನವಿಡೀ ಆಚರಣೆ ಇರಲಿದ್ದು, ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಸ್ಥಿತರಿರಲಿದ್ದಾರೆ. ಮಾತ್ರವಲ್ಲ, ಕನ್ನಡ ಚಿತ್ರರಂಗದ ಸ್ಟಾರ್ ನಟ-ನಿರ್ದೇಶಕರು ಸೇರಿದಂತೆ ಹಲವು ತಾರೆಯರು ಕೂಡ ಭಾಗಿ ಆಗಲಿರುವುದರಿಂದ ಈ ಸಂಭ್ರಮಕ್ಕೆ ತಾರಾ ಕಳೆ ಇರಲಿದೆ.
ಇದು ಐದನೇ ವಿಶ್ವ ಕುಂದಾಪುರ ಕನ್ನಡ ದಿನವಾಗಿದ್ದು, ಈ ಸಲ ಇನ್ನಷ್ಟು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯ ಬಂಟರ ಸಂಘದ ಭವನದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೂ ನಿರಂತರವಾಗಿ ಈ ಆಚರಣೆ ನಡೆಯಲಿದೆ.
ಸಮಾನಮನಸ್ಕ ಗೆಳೆಯರ ಸಾರಥ್ಯದಲ್ಲಿ ಆಯೋಜನೆಯಾಗುತ್ತ ಬಂದಿರುವ ಈ ದಿನಾಚರಣೆಯು ಈ ಸಲ ‘ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು’ ಎಂಬ ವೇದಿಕೆಯಡಿ ಆಯೋಜನೆಗೊಂಡಿದೆ. ಕುಂದಾಪ್ರ ಕನ್ನಡ ಹಬ್ಬದ ಕುರಿತು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ಮಾಹಿತಿ ನೀಡಿದರು.
ಇದು ಕುಂದಾಪುರ ನೆಲಮೂಲದ ಭಾಷಾ ಸಂಪತ್ತು, ಆಚಾರ-ವಿಚಾರ, ಕಲೆ, ಕ್ರೀಡೆ, ವೈವಿಧ್ಯಮಯ ಆಹಾರ ಮುಂತಾದ ಕುಂದಾಪುರ ಜನಜೀವನ, ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಸಾರುವ ಜೊತೆಗೆ ಇಲ್ಲಿ ನೆಲೆಸಿರುವ ಕುಂದಗನ್ನಡಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಉತ್ಸವವಾಗಿರುತ್ತದೆ. ಬೆಂಗಳೂರಿನಲ್ಲಿ ಲಕ್ಷಾಂತರ ಕುಂದಗನ್ನಡಿಗರಿದ್ದು ತಮ್ಮ ತಾಯಿಬೇರಿನ ಜೊತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯದಂತಹ ಸದುದ್ದೇಶವನ್ನು ಕುಂದಾಪ್ರ ಕನ್ನಡ ಹಬ್ಬವು ಹೊಂದಿದೆ ಎಂದು ಅವರು ತಿಳಿಸಿದರು.