ಉಡುಪಿ, ಏ 03(SM): ಈ ಬಾರಿ ದೇಶದಲ್ಲಿ ಮೋದಿ ಅಲೆಯಿಲ್ಲ. ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಏನೂ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಉಡುಪಿಗೆ ಭೆಟಿ ನೀಡಿದ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಬಿ.ಜೆ.ಪಿ ನಾಯಕರು ಕೀಳುಮಟ್ಟದ ಮಾತುಗಳನ್ನು ಆಡುತ್ತಾರೆ ಎಂದರು. ಇನ್ನು ರಾಜ್ಯದಲ್ಲಿ ನರೇಂದ್ರ ಮೋದಿ ಹೆಸರಲ್ಲಿ ಓಟು ಕೇಳುತ್ತಾರೆ. ಆದರೆ ಬಿಜೆಪಿಯವರಲ್ಲಿ ಬಂಡವಾಳ ಇಲ್ಲ ಎಂದರು. ಇನ್ನು ಮುಂದೆ ಮಾತಿನಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಮಾತಿನ ಮೂಲಕವೇ ಬಿಜೆಪಿ ನಾಯಕರು ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಈ ಬಾರಿ ನಿರುದ್ಯೋಗಿ ಯುವಕರು ನರೇಂದ್ರ ಮೋದಿಗೆ ಮತ ಹಾಕುವುದಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಸೋಲು ಸ್ವೀಕಾರ ಮಾಡಲೇ ಬೇಕಾಗಿದೆ ಎಂದರು.
ಇನ್ನು ಶಿವರಾಮಗೌಡ ಸುಮಲತಾ ನಾಯ್ಡು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಜಾತಿ ವ್ಯಾಮೋಹಕ್ಕೆ ಒಳಗಾಗಿಲ್ಲ. ನಾನು ಯಾರನ್ನು ಕೂಡ ಜಾತಿ ಆಧಾರದಲ್ಲಿ ನೋಡಿಲ್ಲ. ಜಾತಿ ವಿಚಾರದಲ್ಲಿ ಯಾರು ಮಾತನಾಡಿದರೂ ತಪ್ಪು ಎಂದಿದ್ದಾರೆ.
ಇನ್ನು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಯಶ್ ದರ್ಶನ್ ಅಬ್ಬರದ ಪ್ರಚಾರ ಹಿನ್ನಲೆ ಪ್ರತಿಕ್ರಿಯೆ ನೀಡಿದ ಸಿಎಂ ಹೆಚ್ ಡಿಕೆ, ನಿಖಿಲ್ ಗೆಲ್ಲುವಲ್ಲಿ ಯಾವುದೇ ಸಂಶಯ ಬೇಡ. ಯಾವುದೇ ಅಪಪ್ರಚಾರ ನಡೆದರೂ ನಿಖಿಲ್ ಗೆಲುತ್ತಾರೆ. ಮಂಡ್ಯದಲ್ಲಿ ದೊಡ್ಡಮಟ್ಟದ ಮಾರ್ಜಿನ್ ನಲ್ಲಿ ಗೆಲುವು ಸಾಧಿಸುತ್ತೇವೆ. ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಮಂಡ್ಯದಲ್ಲಿ ಮಾತ್ರ ಚುನಾವಣೆ ಎಂಬಂತೆ ಬಿಂಬಿಸಲಾಗುತ್ತಿದೆ. ಮಂಡ್ಯ ಚುನಾವಣೆಗೆ ಪ್ರಚಾರ ನೀಡುತ್ತಿದ್ದಾರೆ. ಬೇಜಾರಾದ ಸಂದರ್ಭದಲ್ಲಿ ಹಾಸನ, ತುಮಕೂರನ್ನೂ ಕೂಡ ತೋರಿಸುತ್ತಾರೆ ಎಂದರು.