ಮಂಗಳೂರು, ಜು 20 (DaijiworldNews/SM): ನಗರದ ಏರ್ಪೋರ್ಟ್ ರಸ್ತೆಯ ಯೆಯ್ಯಾಡಿಯಿಂದ ಪದವಿನಂಗಡಿವರೆಗಿನ ಫುಟ್ ಪಾತ್ ನಲ್ಲಿದ್ದ ಅಂಗಡಿಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರವು ಮಾಡಿದರು.
ಇದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು, ಹೊರ ಜಿಲ್ಲೆ, ಹೊರ ರಾಜ್ಯಗಳ ಜನರು ಮತ್ತು ವಿಐಪಿ, ವಿವಿಐಪಿಗಳು ಓಡಾಡುವ ರಸ್ತೆಯಾಗಿದೆ. ರಸ್ತೆಯ ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡುವುದರಿಂದ ನಗರದ ಸೌಂದರ್ಯ ಕೆಡುವುದಲ್ಲದೆ, ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.
ಕೆಲವೊಮ್ಮೆ ಅಪಘಾತಗಳೂ ಸಂಭವಿಸುತ್ತವೆ. ಹಾಗಾಗಿ ಫುಟ್ ಪಾತ್ ತೆರವು ಕಾರ್ಯಾಚರಣೆ ನಡೆಸಲಾಯಿತು. ಫುಟ್ ಪಾತ್ ನಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡಬಹುದೇ ಹೊರತು ಒಂದೇ ಕಡೆ ಸ್ಥಿರವಾಗಿ ಇರುವ ನಿರ್ಮಾಣದಲ್ಲಿ ವ್ಯಾಪಾರ ಮಾಡುವಂತಿಲ್ಲ ಎಂದು ಮಹಾನಗರ ಪಾಲಿಕೆಯ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಫುಟ್ ಪಾತ್ ವ್ಯಾಪಾರಿಗಳಿಗೆ ಮನವರಿಕೆ ಮಾಡಿದರು.