ಕುಂದಾಪುರ, ಜು 20 (DaijiworldNews/MS): ರಾತ್ರಿ ಮನೆಯಲ್ಲಿ ಮಲಗಿದ್ದ ಆರು ವರ್ಷದ ಬಾಲೆಯೊಬ್ಬಳು ನಿದ್ದೆಗಣ್ಣಿನಲ್ಲಿ ಎದ್ದು ಸುಮಾರು ಮೂರು ಕಿಲೋಮೀಟರ್ ದೂರ ನಡೆದು ಕೊರಗಜ್ಜನ ನಾಮಫಲಕದ ಮುಂದೆ ಪತ್ತೆಯಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಮೀಪ ದಬ್ಬೆಕಟ್ಟೆ – ತೆಕ್ಕಟ್ಟೆ ರಸ್ತೆಯಲ್ಲಿ ಹೋಗುತ್ತಿದ್ದ ಚಾರುಕೊಟ್ಟಿಗೆ ಅರ್ಚನಾ ಬಾರ್ ನ ವಿಶ್ವನಾಥ್ ಎಂಬವರಿಗೆ ಬಾಲಕಿ ಸಿಕ್ಕಿದ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪಿದ್ದಾಳೆ.
ಆ ಮೂಲಕ ಬಾರಿನ ಸಿಬ್ಬಂದಿಗಳೆಂದರೆ ಬರೀ ಶರಾಬು ಮಾರುವವರು ಮಾತ್ರವಲ್ಲ ಮಾನವೀಯತೆಯನ್ನು ಮೆರೆಯುವರು ಎಂದು ಕುಂದಾಪುರ ತಾಲ್ಲೂಕಿನ ಕೊರ್ಗಿ ಗ್ರಾಮದ ಚಾರು ಕೊಟ್ಟಿಗೆ ಅರ್ಚನಾ ಬಾರ್ ನ ಸಿಬ್ಬಂದಿಗಳು ಮಾಡಿ ತೋರಿಸಿದ್ದಾರೆ.
ಬುಧವಾರ ರಾತ್ರಿ ಚಾರ್ ಕೊಟ್ಟಿಗೆ ಬಾರಿನ ವಿಶು ( ವಿಶ್ವನಾಥ ಪೂಜಾರಿ) ರಾತ್ರಿ ಸರಿ ಸುಮಾರು 2 ಗಂಟೆ ಹೊತ್ತಿಗೆ ಬಾರಿನ ತನ್ನೆಲ್ಲ ಲೆಕ್ಕಾಚಾರವನ್ನು ಪೂರೈಸಿಕೊಂಡು ಸಿಬ್ಬಂದಿಗಳೊಂದಿಗೆ ಮನೆಗೆ ತೆರಳುತ್ತಿರುವಾಗ ದಬ್ಬೆಕಟ್ಟೆ ತೆಕ್ಕಟ್ಟೆ ರೋಡಿನಲ್ಲಿ ಆರು ವರ್ಷದ ಹೆಣ್ಣು ಮಗು ವಿವಸ್ತ್ರವಾಗಿ ಸ್ವಾಮಿ ಕೊರಗಜ್ಜನ ನಾಮಫಲಕದ ಕೆಳಗೆ ನಿಂತಿದ್ದನ್ನು ಕಂಡಿದ್ದಾರೆ. ಆ ಹೊತ್ತಿನಲ್ಲಿ ಒಂಟಿ ಮಗು ಇಲ್ಲಿಗೆ ಬರಲು ಹೇಗೆ ಸಾಧ್ಯ ಎಂದು ಆಲೋಚಿಸಿ ಪ್ರತಿಯೊಂದು ಚಿತ್ರಣವನ್ನು ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡು ಮಗುವಿನ ರಕ್ಷಣೆಗೆ ಧಾವಿಸುತ್ತಾರೆ. ನಂತರ ಮಗುವಿನ ಹತ್ತಿರ ಮಗುವಿನ ಪೂರ್ವ ಪರ ವನ್ನು ವಿಚಾರಿಸಿ ಮಗುವನ್ನ ಅವರ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಇತ್ತ ಮಗು ನಾಪತ್ತೆಯಾದ ವಿಷಯವೇ ತಿಳಿಯದೆ ಮನೆಯವರು ಮಗುವನ್ನು ಕಂಡು ದಂಗಾಗಿ ಹೋಗಿದ್ದಾರೆ.
ನಿದ್ದೆ ಕಣ್ಣಿನಲ್ಲಿ ನಡೆಯುತ್ತಿದ್ದ ಮಗುವನ್ನು ತಡೆದು ನಿಲ್ಲಿಸಿದ ಕೊರಗಜ್ಜ ಪವಾಡ ಮೆರೆದಿದ್ದಾರೆ. ಅವರ ಪವಾಡದಿಂದಲೇ ಮಗು ಪಾರಾಗಿ ಬಂದಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.