ಕಾರ್ಕಳ,ಜು 20 (DaijiworldNews/MS): ಕಳವು ಪ್ರಕರಣ ಭಾಗಿಯಾಗಿದ್ದ ಆರೋಪಿಗಳನ್ನು ಕಾರ್ಕಳ ನ್ಯಾಯಾಲಯವು ಅಪರಾಧಿಗಳೆಂದು ತೀರ್ಪು ನೀಡಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2012 ಏಪ್ರಿಲ್ 27ರ ಮಧ್ಯರಾತ್ರಿ ಸುಮಾರು 01-45 ಗಂಟೆಯ ಸಮಯದಲ್ಲಿ ಕಾರ್ಕಳದ ಕುಕ್ಕುಂದೂರು ಗ್ರಾಮದ ಜಯಂತಿನಗರ 2ನೇ ಕ್ರಾಸ್ನ ನಿವಾಸಿ ರಮಾ ಆಚಾರ್ಯ ಎಂಬವರ ಮನೆಯಲ್ಲಿ ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಗೈಯಲಾಗಿತ್ತು.ಆನಂದ ಹಾಗೂ ರತ್ನಾ ಪ್ರಕರಣ ಆರೋಪಿಗಳಾಗಿದ್ದರು.
ಆರೋಪಿಗಳು ಸಮಾನ ಉದ್ದೇಶವಿಟ್ಟುಕೊಂಡುಸ್ವಂತ ಲಾಭಕ್ಕಾಗಿ ಕಳವು ಕೃತ್ಯದಿಂದ ಹಣ ಗಳಿಸುವ ಉದ್ದೇಶದಿಂದ ರಮಾ ಆಚಾರ್ಯ ಮನೆಯ ಬಾಗಿಲು ಮುರಿದು ಮನೆಯೊಳಗೆ ಚಿನ್ನಾಭರಣಗಳನ್ನು ಕಳವುಗೈದಿದ್ದರು.
ಕಳವು ಕೃತ್ಯದ ಚಿನ್ನಾಭರಣಗಳು ಕಳವು ಮಾಲುಗಳೆಂದು ತಿಳಿದೂ ಕೂಡಾ ಅವುಗಳನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಕಳವು ಮಾಲನ್ನು ವಿಲೆ ಮಾಡಲು ಆರೋಪಿ ಆನಂದನಿಗೆ ರತ್ನಾ ಸಹಕರಿಸುತ್ತಿದ್ದಳು.
ಈ ಕುರಿತು ಕಾರ್ಕಳ ನಗರ ಠಾಣೆಯ ಪೋಲೀಸ್ ಉಪನಿರೀಕ್ಷಕರಾಗಿದ್ದ ಜಿ.ಎಂ. ನಾಯ್ಕರ್ ಇವರು ಇವರು ದೋಷಾರೋಪಣಾ ಪಟ್ಟಿಯನ್ನು ಕಾರ್ಕಳ ನ್ಯಾಯಲಯಕ್ಕೆ ದಾಖಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಇವರು ಆರೋಪಿತರ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿ ಆನಂದನಿಗೆ 3 ವರ್ಷ 6 ತಿಂಗಳ ಸದಾ ಸಜೆ ಮತ್ತು ರೂ.2,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ, ಆರೋಪಿ ರತ್ನಾಗೆ 6 ತಿಂಗಳ ಸದಾ ಸಜೆ ಮತ್ತು ರೂ.5,000 ದಂಡ, ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿ ಆದೇಶ ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ಸರಕಾರದ ಪರಸಹಾಯಕ ಸರಕಾರಿ ಅಭಿಯೋಜಕ ರಾಜಶೇಖರ ಪಿ ಶಾಮರಾವ್ ಇವರು ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಮಂಡಿಸಿರುತ್ತಾರೆ.