ಉಡುಪಿ, ಏ 3(SM): ಲೋಕಸಭಾ ಚುನಾವಣಾ ತರಬೇತಿಗೆ ಹಾಜರಾಗದ ೧೮ ಮಂದಿ ಅಧಿಕಾರಿಗಳ ವಿರುದ್ಧ ಶೋಕಾಸ್ ನೋಟೀಸ್ ಜಾರಿಗೊಳಿಸಲಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಕರ್ತವ್ಯ ನಿರ್ವಹಿಸಲು ನೇಮಕಾತಿ ಆದೇಶ ಪಡೆದ ಎಲ್ಲಾ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮಾರ್ಚ್ 31 ರಂದು ಮೊದಲನೇ ಹಂತದ ತರಬೇತಿ ನಡೆದಿದೆ.
ವಿಧಾನ ಸಭಾ ಕ್ಷೇತ್ರವಾರು ತರಬೇತಿ ಕೈಗೊಂಡಿದ್ದು, ತರಬೇತಿಗೆ ಜಿಲ್ಲಾಧಿಕಾರಿಗಳ ಪೂರ್ವಾನುಮೋದನೆ ಪಡೆಯದೇ ಗೈರು ಹಾಜರಾಗಿ ಗಂಭೀರ ಕರ್ತವ್ಯ ಲೋಪವೆಸಗಿರುವ 18 ಮಂದಿ ಅಧಿಕಾರಿಗಳಿಗೆ ಪ್ರಜಾಪ್ರಾತಿನಿದ್ಯ ಕಾಯ್ದೆಯನ್ವಯ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಜಿಲ್ಲಾಧಿಕಾರಿಯವರು ನೋಟೀಸು ಜಾರಿಗೊಳಿಸಿದ್ದಾರೆ. ನೋಟೀಸ್ ಜಾರಿಯಾದ 24 ಗಂಟೆಯೊಳಗೆ ಸಂಬಂಧಿಸಿದ ಅಧಿಕಾರಿಗಳು ಲಿಖಿತ ವಿವರಣೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ತಪ್ಪಿದ್ದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದ್ದಾರೆ.