ಮಂಗಳೂರು, ಜು 18 (DaijiworldNews/SM): ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 1, 2023 ರಂದು ಮನೆಯೊಂದರ ಬಾಗಿಲು ಮುರಿದು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಆರೋಪದ ಮೇಲೆ ಮತ್ತೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಳಿಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿ ಐಕಳ ಹರೀಶ್ ಶೆಟ್ಟಿ ಎಂಬುವವರಿಗೆ ಸೇರಿದ ಚಂದ್ರಿಕಾ ಎಂಬುವರ ಮನೆಯ ಮುಂಬಾಗಿಲ ಬೀಗವನ್ನು 2023ರ ಜ.15ರಂದು ಸಂಜೆ 6.30ರಿಂದ 2023ರ ಜ.16ರಂದು ಬೆಳಗ್ಗೆ 9 ಗಂಟೆಯ ಅವಧಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಒಡೆದು ಒಳ ನುಗ್ಗಿ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಚಿನ್ನಾಭರಣ ದೋಚಿದ್ದರು.
ಈ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಸಿಬಿ ಎಸಿಪಿ ಪಿಎ ಹೆಗ್ಡೆ ನೇತೃತ್ವದ ಪೊಲೀಸ್ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 56,50,000 ರೂಪಾಯಿ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್ ಹ್ಯಾಂಡ್ಸೆಟ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇತರೆ ಆರೋಪಿಗಳಿಗೆ ಮನೆ ತೋರಿಸಿ ಕಳ್ಳತನಕ್ಕೆ ಸಹಕರಿಸಿದ ಬೊಂಡತಿಲ ಗ್ರಾಮದ ನಿವಾಸಿ ಮಹಮ್ಮದ್ ಷರೀಫ್(40) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ಬಂಗಾರದ ಪೆಂಡೆಂಟ್ ಮತ್ತು ಮೊಬೈಲ್ ಫೋನ್ ಹ್ಯಾಂಡ್ ಸೆಟ್ ವಶಪಡಿಸಿಕೊಳ್ಳಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಕೆಲ ಆರೋಪಿಗಳು ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ