ಉಡುಪಿ, ಜು 18 (DaijiworldNews/AK): ದೋಷ ಪೂರಿತ ಟೈಲ್ಸ್ ಗಳನ್ನು ಪೂರೈಕೆ ಮಾಡಿದ ಕಂಪನಿ ಮತ್ತು ಡೀಲರ್ ಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 1 ಲಕ್ಷ ರೂ ಕ್ಕೂ ಹೆಚ್ಚಿನ ದಂಡ ವಿಧಿಸಿದೆ.
ಕುಂದಾಪುರದ ಸ್ಟೇಟ್ ಬ್ಯಾಂಕ್ ಉದ್ಯೋಗಿ ಪ್ರಕಾಶ್ ರವರು ತಮ್ಮ ಮನೆಯ ನವೀಕರಣಕ್ಕಾಗಿ ಉಡುಪಿಯ ನಿಟ್ಟೂರು ಬಳಿಯಿರುವ ಗಣೇಶ್ ಮಾರ್ಬಲ್ಸ್ ನಿಂದ ಕಜಾರಿಯ ಕಂಪೆನಿಯ ಸುಮಾರು 81,158 ರೂ ಬೆಲೆ ಬಾಳುವ ಟೈಲ್ಸ್ ಗಳನ್ನು ಖರೀದಿಸಿದ್ದಾರೆ.
ಹೀಗೆ ಖರೀದಿ ಮಾಡಿದ ಟೈಲ್ಸ್ ಗಳನ್ನು ಮನೆಯ ಹಾಲ್ , ಬೆಡ್ ರೂಂಗೆ ಅಳವಡಿಸಿದ್ದಾರೆ.ಆದರೆ ಅಳವಡಿಕೆ ಮಾಡಿದ ನಂತರ ಟೈಲ್ಸ್ನ ಎಲ್ಲಾ ಅಂಚುಗಳು ಮೇಲಕ್ಕೆ ಉಬ್ಬಿಕೊಂಡಿದ್ದು ದೋಷಪೂರಿತವಾಗಿತ್ತು. ಇದರಿಂದ ಬೇರೆ ಟೈಲ್ಸ್ ಗಳನ್ನು ನೀಡುವಂತೆ ಕೇಳಿಕೊ೦ಡಾಗ ಗ್ರಾಹಕನಿಗೆ ಹಾರಿಕೆಯ ಉತ್ತರವನ್ನು ಟೈಲ್ಸ್ ಅಂಗಡಿವರು ನೀಡಿದ್ದಾರೆ.
ಈ ಬಗ್ಗೆ ಪ್ರಕಾಶ್ ಅವರು ಕಜಾರಿಯ ಕಂಪೆನಿಯನ್ನು ಸಂಪರ್ಕಿಸಿದಾಗ ಅವರಿಂದಲೂ ಸೂಕ್ತ ಪ್ರತಿಕ್ರಿಯೆ ಬರದ ಹಿನ್ನಲ್ಲೆ ಗಣೇಶ್ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿ ವಿರುದ್ದ ದೋಷಪೂರಿತ ಟೈಲ್ಸ್ ಪೂರೈಕೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ. ತನಗಾದ ನಷ್ಟ ಹಾಗೂ ಮಾನಸಿಕವಾಗಿ ವೇದನೆ ಸೇರಿದಂತೆ ಪರಿಹಾರವಾಗಿ 5,60,000 ರೂ ನೀಡಬೇಕು ಎಂದು ಆಯೋಗಕ್ಕೆ ಮೊರೆ ಹೋಗಿದ್ದಾರೆ.
ದೂರಗೆ ಸಂಬಂಧಿಸಿದಂತೆ ವಾದ ವಿವಾದವನ್ನು ಆಲಿಸಿದ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗಣೇಶ್ ಮಾರ್ಬಲ್ಸ್ ರವರು ಪೂರೈಕೆ ಮಾಡಿದ ಟೈಲ್ಸ್ ದೋಷಪೂರಿತ ಎಂದು ಗ್ರಾಹಕನು ಸಾಬೀತುಪಡಿಸಿದ್ದಾರೆ ಈ ಬಗ್ಗೆ ತಪ್ಪಿತಸ್ಥ ಗಣೇಶ್ ಮಾರ್ಬಲ್ಸ್ ಗೆ ಹಾಗೂ ಕಜಾರಿಯ ಕಂಪೆನಿಯವರಿಗೆ ಟೈಲ್ಸ್ ಖರೀದಿಯ 50,592 ರೂ. ಕೆಲಸದ ವೆಚ್ಚ ರೂಪಾಯಿ 15,000ರೂ. ಮಾನಸಿಕ ಹಿಂಸೆ, ತೊಂದರೆ, ದೈಹಿಕ ಶ್ರಮ ಇತ್ಯಾದಿಗಳಿಗೆ ಪರಿಹಾರಕ್ಕಾಗಿ 25,000 ರೂ. ಹಾಗೂ ವ್ಯಾಜ್ಯದ ಖರ್ಚು 20,000 ರೂ. ಮೊತ್ತವನ್ನು ಗ್ರಾಹಕನಿಗೆ 30 ದಿನಗಳ ಒಳಗಾಗಿ ಪಾವತಿಸುವಂತೆ ಆದೇಶಿಸಿದೆ.
ಗ್ರಾಹಕ ಪ್ರಕಾಶ್ ಪರವಾಗಿ ಕುಂದಾಪುರದ ನ್ಯಾಯಾವಾದಿ ನೀಲ್ ಬ್ರಿಯಾನ್ ಪಿರೇರಾರವರು ವಾದ ಮಂಡಿಸಿದ್ದಾರೆ.