ಬಂಟ್ವಾಳ:, ಜು 17 (DaijiworldNews/HR): ಪ್ರಕೃತಿ ಸೌಂದರ್ಯದ ರಮಣೀಯ ಪರಿಸರದಲ್ಲಿರುವ ಪಾಣೆಮಂಗಳೂರಿನ ನರಹರಿ ಪರ್ವತದ ಶ್ರೀ ಸದಾಶಿವ ದೇವಸ್ಥಾನ ಹಾಗೂ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆ ತೀರ್ಥಸ್ನಾನ ಸೋಮವಾರ ಸಂಪನ್ನಗೊಂಡಿತು.
ತಾಲೂಕಿನ ಇತಿಹಾಸ ಪ್ರಸಿದ್ದ ಈ ಎರಡೂ ಕ್ಷೇತ್ರಕ್ಕೆ ಭಕ್ತರು ಮುಂಜಾನೆಯೇ ಅಗಮಿಸಿ ನರಹರಿ ಪರ್ವತದಲ್ಲಿರುವ ಶಂಖ, ಚಕ್ರ, ಗಧಾ, ಪದ್ಮ ಕೆರೆಗಳಲ್ಲಿ ಹಾಗೂ ಕಾರಿಂಜ ಕ್ಷೇತ್ರದ ಗದಾತೀರ್ಥ ಸರೋವರದಲ್ಲಿ ತೀರ್ಥಸ್ನಾನಗೈದು ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿ ಪುನೀತರಾದರು.
ಅನಾದಿ ಕಾಲದಿಂದಲೂ ಆರೋಗ್ಯ ಸಮೃದ್ಧಿಯ ಸಂದೇಶ ಸಾರುವ ಆಟಿ ಅಮಾವಾಸ್ಯೆಯಂದು ಭಕ್ತಾಧಿಗಳು ಹಾಗೂ ವಿಶೇಷವಾಗಿ ನವದಂಪತಿಗಳು ಮುಂಜಾನೆಯೇ ಆಗಮಿಸಿ ಸಾಲುಗಟ್ಟಿ ನಿಂತು ಕ್ಷೇತ್ರದಲ್ಲಿರುವ ಕೆರೆಗಳಲ್ಲಿ ಪುಣ್ಯ ಸ್ನಾನಮಾಡತ್ತಾರೆ.
ನರಹರಿ ಹಾಗೂ ಕಾರಿಂಜ ಕ್ಷೇತ್ರದಲ್ಲಿ ಸರ್ವರೋಗ ನಿವಾರಕ ಎಂಬ ನಂಬಿಕೆಯಿಂದ ಏಳು ಎಲೆಗಳ ವೃತ್ತಕಾರದ ಜೋಡಣೆಯ “ಸಪ್ತವರ್ಣ” ಪಾಲೆಯ ಮರದ ಕಷಾಯವನ್ನು ಭಕ್ತರಿಗೆ ವಿತರಿಸಲಾಯಿತು.ವಿಶೇಷವಾಗಿ ವರುಣನ ಕೃಪೆ ತೋರಿದ್ದು, ವಿವಿದೆಡೆಯಿಂದ ಸಾವಿರಾರು ಸಂಖ್ಯೆಯಲ್ಲಾಗಮಿಸಿದ ಭಕ್ತರು ಎರಡು ಕ್ಷೇತ್ರದಲ್ಲಿ ತೀರ್ಥಸ್ನಾನಗೈದು ಪುನೀತರಾದರು. ತುಳುನಾಡಿನ ಪಾರಂಪರಿಕೆಯ ದಿನ ಆಟಿ ಅಮವಾಸ್ಯೆ ತೀರ್ಥಸ್ನಾನ ಪವಿತ್ರವಾಗಿದೆ.