ಉಡುಪಿ, ಜು 17 (DaijiworldNews/HR): ಯುವ ಜನತೆ ತಮ್ಮ ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಸ್ಪಷ್ಟ ಗುರಿ ಇಟ್ಟುಕೊಂಡು, ಆ ಗುರಿ ತಲುಪಲು ನಿರಂತರವಾಗಿ ಪರಿಶ್ರಮ ಪಡಬೇಕು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಹೇಳಿದರು.
ಇಂದು ನಗರದ ಅಜ್ಜರಕಾಡು ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನಡೆದ ಆಗ್ನಿಪಥ್ ಸೇನಾ ನೇಮಕಾತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯುವಜನತೆ ತಾವು ಇಟ್ಟುಕೊಂಡ ಗುರಿ ಸಾಧನೆಗೆ ಕಠಿಣ ಶ್ರಮ ಪಡಬೇಕು. ಶ್ರಮ ಪಟ್ಟರೆ ಸ್ವಲ್ಪ ತಡವಾದರೂ ಉತ್ತಮ ಪ್ರತಿಫಲ ದೊರಕೇ ದೊರೆಯುತ್ತದೆ. ಯಾವುದೇ ಸಂದರ್ಭದಲ್ಲಿ ನಿರಾಶರಾಗದೇ ಮುಂದೆ ಸಾಗಿದ್ದಲ್ಲಿ ಯಶಸ್ಸು ಸಿಗಲಿದೆ. ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡುವ ನಿಟ್ಟಿನಲ್ಲಿ ಯುವ ಜನತೆ ಕಾರ್ಯೋನ್ಮುಖರಾಗಬೇಕು ಎಂದರು.
ಉನ್ನತ ಧ್ಯೇಯದಿಂದ ಅಗ್ನಿಪಥ್ ಮೂಲಕ ದೇಶರಕ್ಷಣೆಗಾಗಿ ಸೇನೆಗೆ ಸೇರ್ಪಡೆಯಾಗುತ್ತಿರುವ ಯುವಜನರ ಕನಸು ಸಾಕಾರಗೊಂಡು ಯಶಸ್ಸು ದೊರೆಯಲಿ, ಮುಂದಿನ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು.
ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಸೇನೆಯ ಮೇಜರ್ ಜನರಲ್ ಆರ್.ಆರ್.ರೈನಾ, ವಿಶಿಷ್ಠ ಸೇವಾ ಮೆಡಲ್, ಅಡಿಷನಲ್ ಡೈರಕ್ಟರ್ ಜನರಲ್, ನೇಮಕಾತಿ ವಿಭಾಗ ಮತ್ತು ಮಂಗಳೂರು ಸೇನಾ ನೇಮಕಾತಿ ವಿಭಾಗದ ಮುಖ್ಯಸ್ಥ ಕರ್ನಲ್ ಅನುಜ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.
ಇಂದು ನಡೆದ ರ್ಯಾಲಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ 41, ಉಡುಪಿಯ 59, ದ.ಕನ್ನಡದ 88, ದಾವಣಗೆರೆಯ 91, ಶಿವಮೊಗ್ಗದ 92 ಹಾಗೂ ಹಾವೇರಿ ಜಿಲ್ಲೆಯ 294 ಸೇರಿದಂತೆ ಒಟ್ಟು 665 ಅಭ್ಯರ್ಥಿಗಳು ಭಾಗವಹಿಸಿದ್ದರು.
ಬೆಳಗ್ಗೆ 6.30 ರಿಂದ ನಡೆದ ಓಟದ ಸ್ಪರ್ಧೆಯಲ್ಲಿ ಅಭ್ಯರ್ಥಿಗಳನ್ನು ತಲಾ 100 ಜನರಂತೆ ತಂಡಗಳಾಗಿ ವಿಂಗಡಿಸಲಾಗಿದ್ದು, ನಿಗದಿತ ದೂರ 1600 ಮೀ. (ಕ್ರೀಡಾಂಗಣದ 4 ಸುತ್ತು) ನ್ನು 5.30 ನಿಮಿಷದೊಳಗೆ ಪೂರ್ಣಗೊಳಿಸಿದವರನ್ನು ಮತ್ತು 5.30 ರಿಂದ 5.45 ನಿಮಿಷದೊಳಗೆ ಪೂರ್ಣಗೊಳಿಸಿದವರನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತಿತು. ಅದರ ನಂತರ ಓಡಿದ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಯಿತು. ಕೆಲವೇ ಸೆಕಂಡ್ಗಳ ಅಂತರದಲ್ಲಿ ಓಟವನ್ನು ಪೂರ್ಣಗೊಳಿಸಲಾಗದೇ ವಿಫಲರಾದ ಹಲವು ಅಭ್ಯರ್ಥಿಗಳು ಸ್ಥಳದಲ್ಲೇ ರೋಧಿಸಿ, ತಮ್ಮನ್ನು ಅರ್ಹತೆಗೆ ಪರಿಗಣಿಸುವಂತೆ ಸೇನೆಯ ಅಧಿಕಾರಿಗಳಲ್ಲಿ ಬೇಡಿಕೊಳ್ಳುತ್ತಿದ್ದರು. ಆದರೆ ಸೇನೆಯ ಅಧಿಕಾರಿಗಳು ಅವರನ್ನು ಮುಂದಿನ ರ್ಯಾಲಿಯಲ್ಲಿ ಮತ್ತೊಮ್ಮೆ ಪ್ರಯತ್ನಿಸುವಂತೆ ಸಮಾಧಾನ ಮಾಡಿ ಕಳುಹಿಸುತ್ತಿದ್ದರು.
ಓಟದ ಸ್ಪರ್ಧೆಯಲ್ಲಿ ಸಂಪೂರ್ಣ ನಿತ್ರಾಣರಾದವರಿಗೆ ತುರ್ತು ಪ್ರಥಮ ಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆ ನೀಡಲು ಅಂಬುಲೆನ್ಸ್ ಸಹಿತ ವೈಧ್ಯಾಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಸ್ಥಳದಲ್ಲಿ ಯಾವುದೇ ಗದ್ದಲ, ನೂಕು ನುಗ್ಗಲು ಉಂಟಾಗದAತೆ ಪೊಲೀಸ್ ಸಿಬ್ಬಂದಿ ಅಗತ್ಯ ಮುಂಜಾಗ್ರತೆ ವಹಿಸಿದ್ದರು.
ರ್ಯಾಲಿಯಲ್ಲಿ ಅಭ್ಯರ್ಥಿಗಳಿಗೆ 1600 ಮೀ ಓಟದ ಜೊತೆಗೆ 9 ಅಡಿ ಕಂದಕ ಜಿಗಿತ, ಫುಲ್ ಅಪ್, ಎತ್ತರ, ಎದೆಯ ಸುತ್ತಳತೆ ಮತ್ತು ತೂಕ ಹಾಗೂ ವೈದ್ಯಕೀಯ ಪರೀಕ್ಷೆ ಮುಂತಾದ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಜುಲೈ 17 ರಿಂದ 25 ರ ವರೆಗೆ ನಡೆಯುವ ಈ ರ್ಯಾಲಿಗೆ ಜಿಲ್ಲಾಡಳಿದ ಮೂಲಕ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಅಭ್ಯರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.
ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ 6,800 ಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಂಡಿದ್ದು, ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮೆನ್, ಅಗ್ನಿವೀರ್ ಕ್ಲಕ್/ಸ್ಟೋರ್ ಕೀಪರ್ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.