ಮಂಗಳೂರು, ಜು 17 (DaijiworldNews/MS): ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕನಿಂದಲೇ ಕೊಲೆಯಾದ ಕಾರ್ಮಿಕ ಗಜ್ಞಾನ್ ಜಗು ನ ಅಂತ್ಯಸಂಸ್ಕಾರವನ್ನು ಇಂದು ನಗರದ ನಂದಿಗುಡ್ಡೆಯ ಸ್ಮಶಾನದಲ್ಲಿ ಸ್ಥಳೀಯರು ನೆರವೇರಿಸಿದರು.
ಉತ್ತರ ಭಾರತ ಮೂಲದ ಕಾರ್ಮಿಕ ಗಜ್ಞಾನ್ ಕುಟುಂಬಸ್ಥರು ಯಾರೆಂದೆ ಪತ್ತೆಯಾಗದಿರುವ ಕಾರಣ ಮಹಮ್ಮದ್ ಅಝರ್ ನೇತೃತ್ವದಲ್ಲಿ ನಡೆದ ಇಂದು ಅಂತ್ಯಸಂಸ್ಕಾರ ಕಾರ್ಯ ನೆರವೇರಿತು.
ಈ ಪ್ರಕರಣದಲ್ಲಿ ದೂರುದಾರರು ಹಾಗೂ ಪ್ರಮುಖ ಸಾಕ್ಷಿಯಾಗಿರುವ ಅಝರ್ ಅವರು ಕಾರ್ಮಿಕ ಗಜ್ಞಾನ್ ಅವರ ಅಂತ್ಯಸಂಸ್ಕಾರವನ್ನು ಪಾಂಡೇಶ್ವರ ಪೊಲೀಸರ ಸಮ್ಮುಖದಲ್ಲಿಯೇ ನೆರವೇರಿಸಿದರು
ಘಟನೆಯ ಹಿನ್ನಲೆ:
ಉತ್ತರ ಭಾರತ ಮೂಲದ ಕಾರ್ಮಿಕ ಗಜ್ಞಾನ್ ಮುಳಿಹಿತ್ಲು ಜಂಕ್ಷನ್ನಲ್ಲಿ ಇರುವ ತೌಸಿಫ್ ಹುಸೈನ್ ನ ಜನರಲ್ ಸ್ಟೋರ್ನಲ್ಲಿ ಕೆಲಸಕ್ಕಿದ್ದ. ಜು.೮ ರ ಶನಿವಾರ ಬೆಳಗ್ಗೆ ಕ್ಷುಲ್ಲಕ ಕಾರಣಕ್ಕೆ ಗಜ್ಞಾನ್ನನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್ ಸ್ಪರ್ಶವಾಗಿರುವುದಾಗಿ ಮಧ್ಯಾಹ್ನ ಸುಮಾರು 1.30ಕ್ಕೆ ತಿಳಿಸಿದ್ದ. ಗಾಯಗೊಂಡ ಗಜ್ಞಾನನನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಅನಂತರದಲ್ಲಿ ಮಂಗಳೂರು ದಕ್ಷಿಣ ಪೊಲೀಸರು ತನಿಖೆಯನ್ನು ಆರಂಭಿಸಿ ಪರಿಸರದ ಸಾರ್ವಜನಿಕರನ್ನು ವಿಚಾರಿಸಿದಾಗ ಸಾಕ್ಷ್ಯಗಳು ಲಭ್ಯವಾಗಿದ್ದು ಇದೊಂದು ಕೊಲೆ ಪ್ರಕರಣವೆಂದು ದೃಢಪಟ್ಟಿದ್ದು ಆರೋಪಿ ತೌಸಿಫ್ ಹುಸೈನ್ನನ್ನು ಬಳಿಕ ಪಾಂಡೇಶ್ವರ ಪೊಲೀಸರು ಬಂಧಿಸಿದ್ದರು.