ಮಂಗಳೂರು, ಎ03(SS): ನಗರದಲ್ಲಿ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ತಮ್ಮ ಉತ್ತಮ ಪ್ರಜಾಕೀಯ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು. ಜನರಿಗೆ ವಿಚಾರಗಳನ್ನು ತಲುಪಿಸುವುದೇ ಪ್ರಜಾಕೀಯ ಪಕ್ಷದ ಗುರಿ. ಸಿಎಂ ಮತ್ತು ಪ್ರಧಾನಿಗೆ ಸಂಬಳ ಕೊಡುವುದು ಜನರು. ಪ್ರಜಾಪ್ರಭುತ್ವದಲ್ಲಿ ಜನರೇ ಅಧಿಕಾರ ನಡೆಸಬೇಕು. ಜನರು ಹೇಳಿದ ಹಾಗೆ ವ್ಯವಸ್ಥೆ ನಡೆಯಬೇಕು. ದೇಶದಲ್ಲಿ ಜ್ಞಾನ ಉಳ್ಳವರು ಮುಂದೆ ಬರಬೇಕು. ಪಾರದರ್ಶಕ ಆಡಳಿತ ಬರಬೇಕು. ಜನರು ವಿಚಾರ ಮಾಡಿ ವೋಟು ಹಾಕಬೇಕು ಎಂದು ತಿಳಿಸಿದರು.
ಜಾತಿ - ಧರ್ಮದ ಲೆಕ್ಕಾಚಾರ ಹಾಕಿ ಮತ ಕೇಳುವವರೇ ಹೆಚ್ಚು. ನಮ್ಮದು ರಾಜಕೀಯ ಪಕ್ಷ ಅಲ್ಲವೇ ಅಲ್ಲ. ನಮ್ಮದು ಪ್ರಜಾಕೀಯ ಪಕ್ಷವಾಗಿದೆ. ರಾಜಕೀಯಕ್ಕೆ ತದ್ವಿರುದ್ಧವಾದ ಪಕ್ಷ ನಮ್ಮದು. ನಮ್ಮ ಪಕ್ಷದಲ್ಲಿ ನಾವು ಗೆಲ್ಲುವುದಲ್ಲ, ಜನ ಗೆಲ್ಲಬೇಕು. ಪ್ರಜಾಕೀಯದಲ್ಲಿ ಜನರೇ ರಾಜರು ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಳಿಕ, ನಗರದಲ್ಲಿ ಉಪೇಂದ್ರ ಪ್ರಚಾರ ಕಾರ್ಯ ನಡೆಸಿದ್ದಾರೆ. ಈ ವೇಳೆ ಉಪೇಂದ್ರರವರು ಗ್ರಂಥಾಲಯ, ಮಾರ್ಕೆಟ್, ಆಟೋ ಚಾಲಕರ ಬಳಿ ಹೋಗಿ ಕರ ಪತ್ರ ನೀಡಿ ತಮ್ಮ ಉತ್ತಮ ಪ್ರಜಾಕೀಯ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಪ್ರಚಾರ ನಡೆಸುತ್ತಿದ್ದ ವೇಳೆ ನಟ ಉಪೇಂದ್ರರವರನ್ನು ಕಂಡು ಸ್ಥಳೀಯ ಸರ್ಕಾರಿ ಶಾಲೆಯ ಮಕ್ಕಳು ಅವರ ಬಳಿ ಒಡೋಡಿ ಬಂದಿದ್ದಾರೆ. ಮಾತ್ರವಲ್ಲ, ಉಪೇಂದ್ರ ಅವರನ್ನು ಕಂಡು ಸಂತಸಗೊಂಡ ಮಕ್ಕಳು ಅವರ ಕೈ ಕುಲುಕಿ ಸಂಭ್ರಮಿಸಿದ್ದಾರೆ.
ಈ ವೇಳೆ ನಟ ಉಪೇಂದ್ರ, ತಾನೂ ಒಬ್ಬ ನಟ ಎಂಬುವುದನ್ನು ಮರೆತು ಮಕ್ಕಳಿಗೆ ಕಲ್ಲಂಗಡಿ ಹಣ್ಣನ್ನು ಹಂಚಿ ಮಕ್ಕಳೊಂದಿಗೆ ಮಕ್ಕಳಂತೆ ಬೆರೆತಿದ್ದಾರೆ.
ಈ ಸರಳತೆಯನ್ನು ಕಂಡು ಕರಾವಳಿಯ ಜನ ಉಪೇಂದ್ರ ಅವರನ್ನು ಪ್ರಶಂಸಿದ್ದಾರೆ.