ಮಂಗಳೂರು, ಜು 17 (DaijiworldNews/MS): ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗದೆ 9 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಕಣ್ಣೂರಿನ ಅಡ್ಯಾರ್, ಕರ್ಮರ್ ನಿವಾಸಿ ಸೈಯದ್ ಹಸೈನಾರ್ ಅಲಿಯಾಸ್ ಹಸೈನ್(35) ಬಂಧಿತ ಆರೋಪಿಯಾಗಿದ್ದಾನೆ.
ಈತ ೨೦೧೨ರಲ್ಲಿ ಯುವತಿಯೋರ್ವಳು ಲೇಡಿಹಿಲ್ ಸಮೀಪದ ಪ್ಲ್ಯಾಟ್ ಕಡೆಗೆ ಹೋಗುತ್ತಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಉರ್ವ ಠಾಣೆಗೆ ಯುವತಿ ದೂರು ನೀಡಿದ್ದಳು. ಆರೋಪಿಯನ್ನು ಈ ವೇಳೆ ಬಂಧಿಸಲಾಗಿತ್ತು. ಬಳಿಕ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ.
ಬಳಿಕ ವಿಚಾರಣೆ ನಡೆದು, ಆರೋಪಿಗೆ ಜೆಎಂಎಫ್ ಸಿ 3ನೇ ನ್ಯಾಯಾಲಯ ಹಸೈನಾರ್ ಗೆ 2014ರ ಅಕ್ಟೋಬರ್ 18ರಂದು 4 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು 1,500ರೂ. ದಂಡ ವಿಧಿಸಿ ಆದೇಶಿಸಿತ್ತು. ಆದರೆ ಅಪರಾಧಿ ಆ ಬಳಿಕ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಇತನ ವಿರುದ್ದ ವಾರೆಂಟ್ ಹೊರಡಿಸಲಾಗಿತ್ತು. ಜುಲೈ 15 ರಂದು ಉರ್ವ ಪೊಲೀಸರು ಬಂಧಿಸಿದ್ದಾರೆ.