ಉಡುಪಿ, ಎ03(SS): ಮನುಷ್ಯನಿಗಾದರೆ ಹೇಗೋ ನೀರು ದೊರೆಯಬಹುದು. ಆದರೆ, ಪಕ್ಷಿಗಳು ಹಾಗೂ ಪ್ರಾಣಿಗಳು ನೀರು ಸಿಗದೆ ಜೀವ ಕಳೆದುಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ. ಪ್ರಾಣಿ ಹಾಗೂ ನಾನಾ ಪಕ್ಷಿ ಸಂಕುಲ ನೀರಿಗಾಗಿ ಪರಿತಪಿಸುತ್ತಿವೆ. ಕರಾವಳಿಯಲ್ಲಿ ಬಿಸಿಲು ಹೆಚ್ಚಾಗುತ್ತಿದ್ದು, ಪರಿಸರದ ಬಾವಿ, ಹಳ್ಳ, ಕೊಳಗಳು ನೀರಿಲ್ಲದೆ ಖಾಲಿಯಾಗಿವೆ. ಪರಿಣಾಮ, ಮನುಷ್ಯ ಮಾತ್ರವಲ್ಲ ಜಾನುವಾರು, ಬೀದಿನಾಯಿ, ಪಕ್ಷಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ, ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಸಲುವಾಗಿ ಉಡುಪಿ ಜಿಲ್ಲಾ ನಾಗರೀಕ ಸಮಿತಿಯು ರಥಬೀದಿ ರಾಘವೇಂದ್ರ ಮಠದ ಮುಂಬಾಗದ ಆಯಾಕಟ್ಟಿನ ಸ್ಥಳದಲ್ಲಿ (ಕಲ್ಲ್ ಮರಾಯಿ) ಕಲ್ಲ್ ಮರ್ಗಿ ಇಟ್ಟು, ಜೀವ ಸಂಕುಲಗಳಿಗೆ ದಾಹ ತಣಿಸಲು ಸಹಕರಿಸಿ, ಮಾನವೀಯತೆಯ ಕೆಲಸ ಮಾಡಲು ಮುಂದಾಗಿದ್ದಾರೆ.
150 ವರ್ಷಗಳ ಹಳೆಯ ಕಲ್ಲು ಮರ್ಗಿ ಇದಾಗಿದ್ದು, ಭಂಡಾರಿಗದ್ದೆ ದಿ. ಎಲ್ಲು ಭಂಡಾರಿ ಅವರಿಗೆ ಸೇರಿದ್ದಾಗಿದೆ. ಸುಮಾರು ನೂರು ವರ್ಷಗಳ ಹಿಂದೆ ಇಲ್ಲಿನ ಸಂಸ್ಕ್ರತ ಕಾಲೇಜಿನ ಸನಿಹ ಜಾನುವಾರುಗಳಿಗೆ ನೀರು ಕುಡಿಯಲು ಇಡುತ್ತಿದ್ದರಂತೆ. ಬಳಿಕ ಈ ಮಾನವೀಯ ಕೆಲಸವನ್ನು ಲಿಂಗು ಭಂಡಾರಿ ಮುಂದುವರಿಸಿದ್ದರು. ನಂತರ ನೀರಿಡುವ ಸಂಪ್ರದಾಯ ಸ್ಥಗಿತಗೊಂಡಿತ್ತು.
ಇದೀಗ ಉಡುಪಿ ಜಿಲ್ಲಾ ನಾಗರೀಕ ಸಮಿತಿಯು ಮತ್ತೆ ಈ ಸಂಪ್ರದಾಯವನ್ನು ಮುಂದುವರೆಸಿದ್ದು, ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಪುರಾತನ ಕಾಲದ ನೀರಿಡುವ ಕಲ್ಲ್ ಮರ್ಗಿಯು ಯಾತ್ರಿಕರ ಗಮನ ಸೆಳೆಯುತ್ತಿದ್ದು ಪ್ರಾಣಿ ಪಕ್ಷಿಗಳಿಗೆ ದಾಹ ತೀರಿಸಿಕೊಳ್ಳಲು ಆಸರೆಯಾಗಿದೆ. ಅನೇಕ ಪ್ರಾಣಿ - ಪಕ್ಷಿಗಳು ಈ ಕಲ್ಲ್ ಮರ್ಗಿಯಲ್ಲಿ ತುಂಬಿಸಿ ಇಟ್ಟಿರುವ ನೀರು ಕುಡಿದು ದಾಹ ತೀರಿಸಿಕೊಳ್ಳುತ್ತಿದೆ.