ಉಡುಪಿ, ಜು 15 (DaijiworldNews/MS): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ,ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಮೂಲಕ ಉಡುಪಿ ಜಿಲ್ಲೆಯ ಸರಕಾರಿ ಬಸ್ ಗಳಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ ಜುಲೈ 14 ರ ವರೆಗೆ ಇದುವರೆಗೆ 3.62 ಕೋಟಿ ರೂ ಆದಾಯ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಮತ್ತು ಕುಂದಾಪುರ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ನಗರ ಸಾರಿಗೆ, ವೇಗದೂತ ಮತ್ತು ಸಾಮಾನ್ಯ ಸಾರಿಗೆ ವರ್ಗ ಈ ಎಲ್ಲಾ ವರ್ಗದಲ್ಲಿಯೂ ಮಹಿಳಾ ಪ್ರಯಾಣಿಕರ ಸಂಚಾರದಲ್ಲಿ ಗಣನೀಯ ಏರಿಕೆಯಾಗಿದ್ದು, ಶಕ್ತಿ ಯೋಜನೆ ಜಾರಿಯಾದ ಬಳಿಕ ಸುಮಾರು 25 ರಿಂದ 30 % ರಷ್ಟು ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿದೆ.
ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಅಂದಿನಿಂದ ಜೂನ್30 ರ ವರೆಗೆ ಉಡುಪಿ ಘಟಕದಲ್ಲಿ , ನಗರ ಸಾರಿಗೆ ಬಸ್ ಗಳಲ್ಲಿ 100838 ಮಹಿಳಾ ಪ್ರಯಾಣಿಕರು ಸಂಚರಿಸಿ 1470793 ರೂ, ವೇಗದೂತ ಬಸ್ ಗಳಲ್ಲಿ 94998 ಮಹಿಳಾ ಪ್ರಯಾಣಿಕರು ಸಂಚರಿಸಿ 7409003 ರೂ, ಸಾಮಾನ್ಯ ಬಸ್ ಗಳಲ್ಲಿ 40232 ಮಹಿಳಾ ಪ್ರಯಾಣಿಕರು ಸಂಚರಿಸಿ 794933 ರೂ, ಆದಾಯ ಬಂದಿದ್ದರೆ, ಕುಂದಪುರ ಘಟಕದಲ್ಲಿ ವೇಗದೂತ ಬಸ್ ಗಳಲ್ಲಿ 71410 ಮಹಿಳಾ ಪ್ರಯಾಣಿಕರು ಸಂಚರಿಸಿ 6325419 ರೂ, ಸಾಮಾನ್ಯ ಬಸ್ ಗಳಲ್ಲಿ 241497 ಮಹಿಳಾ ಪ್ರಯಾಣಿಕರು ಸಂಚರಿಸಿ 4352614 ರೂ, ಆದಾಯ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5,48,975 ಮಹಿಳಾ ಪ್ರಯಾಣಿಕರು ಸಂಚರಿಸಿ 2,03,52,762 ರೂ ಆದಾಯ ಸಾರಿಗೆ ನಿಗಮಕ್ಕೆ ಬಂದಿದೆ.
ಜುಲೈ 14 ರ ವರೆಗೆ ಉಡುಪಿ ಘಟಕದಲ್ಲಿ ಒಟ್ಟು 1,92,641 ಮಹಿಳೆಯರು ಸಂಚರಿಸಿದ್ದು, 78,40,072 ರೂ ಆದಾಯ, ಕುಂದಾಪುರ ಘಟಕದಲ್ಲಿ 2,29,557 ಮಹಿಳೆಯರು ಸಂಚರಿಸಿದ್ದು, 80,88,362 ರೂ ಆದಾಯ ಗಳಿಕೆಯಾಗುವ ಮೂಲಕ ಯೋಜನೆ ಜಾರಿಗೆಯಾದಾಗಿನಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ 3.62 ಕೋಟಿ ರೂ ಆದಾಯ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಾಬಲ್ಯವಿದ್ದರೂ ಸಹ ಶಕ್ತಿ ಯೋಜನೆಯ ನಂತರ ಮಹಿಳಾ ಪ್ರಯಾಣಿಕರು ಸರಕಾರಿ ಬಸ್ ಗಳಲ್ಲಿ ಸಂಚರಿಸಲು ಉತ್ಸಾಹ ತೋರುತ್ತಿದ್ದು, ಸರಕಾರದ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ. ಉಡುಪಿಯ ಘಟಕದಲ್ಲಿ 65 ಬಸ್ ಮತ್ತು ಕುಂದಾಪುರ ಘಟಕದ ಬಸ್ ಗಳು 68 ಬಸ್ ಗಳು ಶಕ್ತಿ ಯೋಜನೆಯಡಿ ಪ್ರತಿದಿನ ಸೇವೆ ನೀಡುತ್ತಿದ್ದು, ಪ್ರತಿದಿನ ಜಿಲ್ಲೆಯ ವಿವಿಧ ಕಡೆಗಳಿಲ್ಲಿ ಮತ್ತು ಜಿಲ್ಲೆಯ ಹೊರಗೆ ಹಲವಾರು ಟ್ರಿಪ್ ಸಂಚರಿಸುತ್ತಿವೆ. ವಾರಾಂತ್ಯದಲ್ಲಿ ಉಡುಪಿಯ ಶ್ರೀ ಕೃಷ್ಠ ಮಠ, ಮಲ್ಪೆ ಬೀಚ್ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೊರ ಜಿಲ್ಲೆಯಿಂದ ಹೆಚ್ಚಿನ ಮಹಿಳಾ ಪ್ರಯಾಣಿಕರು ಆಗಮಿಸುತ್ತಿದ್ದು, ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಸಹ ಆದಾಯ ಬರುತ್ತಿದೆ.
ನಾನು ಪ್ರತಿದಿನ ಕಟಪಾಡಿಯಿಂದ ಮಣಿಪಾಲಕ್ಕೆ ಉದ್ಯೋಗಕ್ಕಾಗಿ ಬರುತ್ತಿದ್ದು, ಈ ಹಿಂದೆ ಖಾಸಗಿ ಬಸ್ ನಲ್ಲಿ ಸಂಚರಿಸುವಾಗ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಟ್ಟು ಸೇರಿ 50 ರೂ ವೆಚ್ಚವಾಗುತ್ತಿದ್ದು, ಖಾಸಗಿ ಸಂಸ್ಥೆಯಲ್ಲಿ ಕಡಿಮೆ ಸಂಬಕ್ಕೆ ದುಡಿಯುವ ನನಗೆ ಪ್ರತಿ ತಿಂಗಳು 1500 ಕ್ಕೂ ಅಧಿಕ ಸಂಬಳದ ಹಣವನ್ನು ಬಸ್ ಚಾರ್ಜ್ ಗಾಗಿಯೇ ವೆಚ್ಚ ಮಾಡಬೇಕಿತ್ತು. ಈಗ ಪ್ರತಿ ದಿನ ಉಳಿಯುವ ರೂ 50 ರಿಂದ ಸಂಜೆ ಮಕ್ಕಳಿಗೆ ಹಾಲು ತೆಗೆದುಕೊಂಡು ಹೋಗಲು ಬಳಸುತ್ತಿದ್ದೇನೆ, ಸರಕಾರದ ಯೋಜನೆ ನನ್ನಂತಹ ಅನೇಕ ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಮಹಿಳಾ ಉದ್ಯೋಗಿಗಳಿಗೆ ಬಹಳ ಅನುಕೂಲವಾಗಿದೆ ಎನ್ನುವುದು ಖಾಸಗಿ ಸಂಸ್ಥೆ ಉದ್ಯೋಗಿ ಪೂರ್ಣಿಮಾ ಕಟಪಾಡಿ ಅವರ ಮಾತು..
"ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂಬ ಕಾರಣಕ್ಕೆ ಸಾರಿಗೆ ಸಿಬ್ಬಂದಿಗಳು ಮಹಿಳಾ ಪ್ರಯಾಣಿಕರ ಬಗ್ಗೆ ಯಾವುದೇ ನಿರ್ಲಕ್ಷ್ಯಯ ತೋರದೇ ನಿಗಧಿತ ಸ್ಥಳದಲ್ಲಿ ಒಬ್ಬಳೇ ಮಹಿಳೆ ಬಸ್ ಗೆ ಕಾಯುತ್ತಾ ನಿಂತಿದ್ದರೂ ಬಸ್ ನಿಲ್ಲಿಸಿ ಹಾಗೂ ನಿಗಧಿತ ಸ್ಥಳದಲ್ಲಿ ಇಳಿಸಿ, ನಗುಮೊಗದ ಸೇವೆ ನೀಡುತ್ತಿದ್ದಾರೆ.. ಹಿರಿಯ ಮಹಿಳೆಯರು ಮತ್ತು ಚಿಕ್ಕ ಮಕ್ಕಳೊಂದಿಗೆ ಸರ್ಕಾರಿ ನಗರ ಸಾರಿಗೆ ಬಸ್ ಗಳಲ್ಲಿ ಸಂಚರಿಸುವುದು ಆರಾಮದಾಯಕವಾಗಿದೆ" - ಸೌಮ್ಯ, ಗೃಹಿಣಿ ,ಉಡುಪಿ.
"ಸರಕಾರದ ಶಕ್ತಿ ಯೋಜನೆಗೆ ಜಿಲ್ಲೆಯ ಮಹಿಳಾ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕುಂದಾಪುರ ತಾಲೂಕು ಮತ್ತು ಇತರೆ ತಾಲೂಕುಗಳಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಂದ ಬೇಡಿಕೆ ಬರುತ್ತಿದೆ, ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ಬಸ್ಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸುವಂತೆ ಹಾಗೂ ಹೊಸ ಮಾರ್ಗಗಗಳಲ್ಲಿ ಸಂಚರಿಸಲು ಅಗತ್ಯವಿರುವ ಪರ್ಮಿಟ್ ನೀಡಲು ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಬೆಂಗಳೂರಿನ ಕೇಂದ್ರ ಕಚೇರಿಯನ್ನು ಕೋರಲಾಗಿದೆ" - ನಿರ್ಮಲಾ ಸಹಾಯಕ ಸಂಚಾರ ನಿಯಂತ್ರಣಾಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಈ ಶಕ್ತಿ ಯೋಜನೆಯು ಮಹಿಳೆಯರು ಸ್ವಾಭಿಮಾನ ಮತ್ತು ಸ್ವಾವಲಂಬಿಯಾಗಿ ಬದುಕಲು ನೆರವಾಗುವುದರ ಜೊತೆಗೆ ಪ್ರವಾಸೋದ್ಯಮದ ಬೆಳವಣಿಗೆ ಹಾಗೂ ಆರ್ಥಿಕ ಬೆಳವಣಿಗೆಗೂ ಸಹ ನೆರವು ನೀಡುತ್ತಿದ್ದು, ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವ ಇತರ ಪ್ರಯಾಣಿಕರ ಸಂಖ್ಯೆಯೂ ಸಹ ಅಧಿಕಗೊಂಡಿದ್ದು, ನಷ್ಠದಲ್ಲಿದ್ದ ರಾಜ್ಯದ ಎಲ್ಲಾ ಸರ್ಕಾರಿ ಸಾರಿಗೆ ನಿಗಮಗಳು ಸಹ ಲಾಭದಾಯಕವಾಗಿ, ಶೀಘ್ರದಲ್ಲಿಯೇ ಸ್ವಾವಲಂಬನೆಯ ಹಾದಿಯಲ್ಲಿ ನಡೆಯಲಿವೆ.