ಬಂಟ್ವಾಳ, ಜು 15 (DaijiworldNews/MS): ಏಲಂ ನೊಟೀಸ್ ನಿಂದ ಮನನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಕಾವಳಮೂಡೂರು ಎಂಬಲ್ಲಿ ಶನಿವಾರ ನಡೆದಿದೆ.
ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯ ಗುರುಪ್ರಸಾದ್ ಪ್ರಭು ಎಂಬವರೇ ಆತ್ಮಹತ್ಯೆಗೆ ಯತ್ನಿಸಿದವರು ಎಂದು ಹೇಳಲಾಗಿದೆ.
ಕಾವಳಮೂಡೂರು ಬ್ಯಾಂಕಿನಲ್ಲಿ ಫೋರ್ಜರಿ ಸಹಿ ಬಳಸಿ ಹಲವರ ಹೆಸರಿನಲ್ಲಿ ಲೋನ್ ಪಡೆದುಕೊಂಡ ಬಗ್ಗೆ ಹಲವು ಸಮಯಗಳಿಂದ ದೂರುಗಳು ಕೇಳಿಬಂದಿದ್ದು, ಈ ಪ್ರಕರಣ ಈಗಾಗಲೇ ಹೈ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ನಿರ್ದೇಶನ ನೀಡಿದ ಹೈಕೋರ್ಟ್ ಎಂಟು ವಾರಗಳಲ್ಲಿ ತನಿಖೆ ನಡೆಸಿ ವರದಿ ನೀಡಲು ಮಂಗಳೂರಿನ ಸಹಕಾರಿ ಸಂಘಗಳ ನಿಬಂಧಕರಿಗೆ ಸೂಚನೆ ನೀಡಿತ್ತು. ಈ ನಡುವೆ ಈ ಘಟನೆ ನಡೆದಿದೆ.
ಬ್ಯಾಂಕಿನಲ್ಲಿ ಗುರುಪ್ರಸಾದ್ ಎಂಬವರ ಹೆಸರಿನಲ್ಲಿಯೂ ಲೋನ್ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಲೋನ್ ಬಾಕಿ ಇರುವ ಬಗ್ಗೆ ಏಲಂ ನೋಟಿಸ್ ಅನ್ನು ನೀಡಲಾಗಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಗುರುಪ್ರಸಾದ್ ಅವರು ಅತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಾಗಿದ್ದು, ಗಂಭೀರಾವಸ್ಥೆಯಲ್ಲಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಘಟನೆ ಕುರಿತಾಗಿ ಗುರುಪ್ರಸಾದ್ ರ ಪತ್ನಿ ದೀಪಾಪ್ರಭು ರವರು ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರುನೀಡಿದ್ದು, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಘಟನೆ ಸುದ್ದಿತಿಳಿಯುತ್ತಿದ್ದಂತೆಯೇ ಮಂಗಳೂರು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್ ಅವರು ಆಸ್ಪತ್ರೆಗೆ ಭೇಟಿನೀಡಿ ಮನೆಮಂದಿಗೆ ಸಾಂತ್ವಾನ ಹೇಳಿದ್ದಿ, ಘಟನೆಯ ಕುರಿತು ಸೂಕ್ತ ತನಿಖೆಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.