ಕುಂದಾಪುರ, ಜು 15(DaijiworldNews/SM): ಚಲಿಸುತ್ತಿದ್ದ ಆಟೋ ರಿಕ್ಷಾವೊಂದನ್ನು ಏರಿ ದಾಂಧಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕುಂದಾಪುರದ ಕೋಣಿ ಮೂರ್ಕೈ ಎಂಬಲ್ಲಿ ಶನಿವಾರ ನಡೆದಿದೆ.
ಆಟೋ ರಿಕ್ಷಾ ಗೋಪಾಡಿಯಿಂದ ಕಾವ್ರಾಡಿಗೆ ಹೋಗುತ್ತಿತ್ತು. ಕೋಣಿ ಮೂರುಕೈ ಬಳಿ ಬರುತ್ತಿದ್ದಾಗ ರಸ್ತೆಯಲ್ಲಿ ನೀರಿದ್ದ ಕಾರಣ ಚಾಲಕ ರಿಕ್ಷಾವನ್ನು ನಿಧಾನಗೊಳಿಸಿದ್ದಾನೆ. ಇದೇ ಸಂದರ್ಭ ರಸ್ತೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ರಿಕ್ಷಾದ ಹಿಂಬದಿಯ ರಾಡ್ ಹಿಡಿದು ಹಿಂಬದಿ ಸೀಟಿಗೆ ನುಗ್ಗಿದ್ದಾನೆ. ಅಲ್ಲದೇ ಸೀಟಿನಲ್ಲಿ ಕುಳಿತಿದ್ದ ಮಗುವಿನ ಕೈಹಿಡಿದು ಎಳೆದಿದ್ದಾನೆ. ಆಗ ಮಗು ಕಿರುಚಿಕೊಂಡಿದ್ದು, ಚಾಲಕ ಹಿಂತಿರುಗಿ ನೋಡಿ ಕೂಗಿದ್ದಾನೆ. ತಕ್ಷಣ ಆರೋಪಿ ಅಪರಿಚಿತ ವ್ಯಕ್ತಿ ಚಾಲಕನ ಸೀಟಿಗೆ ಜಿಗಿದು ಹ್ಯಾಂಡಲ್ ಬಾರಿಗೆ ಕೈ ಹಾಕಿದ್ದಾನೆ. ಇಷ್ಟೊತ್ತಿಗೆ ಚಾಲಕ ರಿಕ್ಷಾವನ್ನು ರಸ್ತೆ ಬದಿಗೆ ಕೊಂಡೊಯ್ದು ನಿಲ್ಲಿಸಿದ್ದು, ಸ್ಥಳೀಯರು ಒಟ್ಟು ಸೇರಿ ಆರೋಪಿಯನ್ನು ಹಿಡಿದುಕೊಂಡಿದ್ದಾರೆ. ಆರೋಪಿಯು ಹಿಂದಿ ಮಾತನಾಡುತ್ತಿದ್ದು, ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಬಳಿಕ ಕುಂದಾಪುರ ಪೊಲಿಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಅಪರಿಚಿತನಾಗಿದ್ದು ಹೆಚ್ಚಿನ ಮಾಹಿತಿ ಲಭಿಸಿಲ್ಲ. ಘಟನೆಯ ನೈಜ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಒಟ್ಟಿನಲ್ಲಿ ಆಟೋ ಚಾಲಕನ ಚಾಣಾಕ್ಷತನದಿಂದ ಪಲ್ಟಿಯಾಗಬಹುದಾದ ರಿಕ್ಷಾ ಬದಿಗೆ ಸರಿದು ನಿಂತಿದೆ ಎಂದು ಸ್ಥಳೀಯರು ಹೇಳಿದ್ದಾರೆ.