ಸುಳ್ಯ, ಜು 14 (DaijiworldNews/HR): ಸುಳ್ಯ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಕುರಿತು ಕಡಬ ಬ್ಲಾಕ್ನ ಕಡಬದಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿ ನಡೆದಿರುವ ಘಟನೆ ವರದಿಯಾಗಿದೆ.
ಇಂದು ಕಡಬ ಅಂಬೇಡ್ಕರ್ ಭವನದಲ್ಲಿ ಪರಾಮರ್ಶೆ ಸಭೆ ನಡೆದಿದ್ದು, ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಸಮಿತಿಯ ಮುಖಂಡರು ಆಗಮಿಸಿದ್ದರು.
ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಇತ್ತೀಚೆಗಷ್ಟೆ ಕಾಂಗ್ರೆಸ್ ಶಿಸ್ತು ಸಮಿತಿಯಿಂದ ಉಚ್ಛಾಟನೆಗೊಳಗಾದ ನಾಯಕರು ಈ ಸಭೆಗೆ ಆಗಮಿಸಿದ್ದ ವೇಳೆ ಜಿ.ಕೃಷ್ಣಪ್ಪ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸ್ವತಃ ಕೃಷ್ಣಪ್ಪ ಅವರೇ ಉಚ್ವಾಟಿತ ನಾಯಕರಲ್ಲಿ, ನೀವು ಈ ಸಭೆಗೆ ಯಾಕೆ ಬಂದಿದ್ದೀರಿ?, ನಿಮಗೆ ಮಾನ ಮರ್ಯಾದಿ ಇಲ್ಲವೇ ಎಂದು ಪ್ರಶ್ನಿಸಿದರೆನ್ನಲಾಗಿದೆ. ಕೃಷ್ಣಪ್ಪ ಬೆಂಬಲಿಗರಾದ ಇತರ ನಾಯಕರು ಕೂಡ ಇದನ್ನು ಪ್ರಶ್ನಿಸಿ ಇಂದಿನ ಈ ಸಭೆಯಲ್ಲಿ ಪಕ್ಷದಿಂದ ಉಚ್ವಾಟಿತರು ಇರಲು ಅವಕಾಶ ಇದೆಯೇ ಎಂದು ಕೇಳಿದ್ದಾರೆ. ಈ ವೇಳೆ ಉಭಯ ತಂಡಗಳ ನಡುವೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ, ಹಲ್ಲೆ ನಡೆಯುವ ತನಕ ತಲುಪಿದ್ದು, ಮಾಹಿತಿ ಪಡೆದ ಪೋಲಿಸರ ಮಧ್ಯಪ್ರವೇಶಿಸಿದ್ದಾರೆ.
ಇನ್ನು ಕೃಷ್ಣಪ್ಪ ಬಣದ ಕೆಲವು ಮಂದಿ ಮುಖಂಡರು ನಂದ ಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪವೂ ವ್ಯಕ್ತವಾಗಿದೆ.
ಈ ಕುರಿತ ವಿಡೀಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನಂದಕುಮಾರ್ ಬಣದ ಮುಖಂಡರೋರ್ವರನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.