ಉಡುಪಿ, ಜು 14 (DaijiworldNews/HR): ದೀರ್ಫ ಮಳೆಯ ಬಳಿಕ ಕಳೆದೆರಡು ದಿನಗಳಿಂದ ಉಡುಪಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ನೆರೆಯಿಂದ ಮಿಂದೆದ್ದಿದ್ದ ಉಡುಪಿ ನಗರದ ಜನರು ಇದೀಗ ಮತ್ತೆ ತಮ್ಮ ಸ್ವ- ಕೆಲಸಗಳಿಗೆ ಮರಳಿದ್ದಾರೆ. ಆದರೆ, ನೆರೆ ನೀರಿನಲ್ಲಿ ಬಂದು ಉಡುಪಿ ನಗರದ ಇಂದ್ರಾಣಿ ನದಿಯ ವಿವಿಧ ಭಾಗಗಳಲ್ಲಿ ಇರುವ ಟ್ರ್ಯಾಶ್ ಬ್ಯಾರಿಯರ್ ನಲ್ಲಿ ಸಂಗ್ರಹವಾಗಿರುವ ಕಸ ಕಡ್ಡಿ, ಪ್ಲಾಸ್ಟಿಕ್ ರಾಶಿಯನ್ನು ಕಂಡರೆ ಒಮ್ಮೆ ನಿಬ್ಬೆರಗಾಗುವುದಂತೂ ನಿಜ.
ಕೊಡವೂರು ಸಮೀಪದ ಇಂದ್ರಾಣಿ ನದಿಯ ಫ್ಲೋಟಿಂಗ್ ಟ್ರ್ಯಾಶ್ ಬ್ಯಾರಿಯರ್ ನಲ್ಲಿ ಕಳೆದೆರಡು ವರ್ಷದಲ್ಲಿ 90 ಟನ್ ಗೂ ಅಧಿಕ ತ್ಯಾಜ್ಯವನ್ನು ಈ ಟ್ರ್ಯಾಶ್ ಬ್ಯಾರಿಯರ್ ಸಂಗ್ರಹಿಸಿದೆ.
ಈ ಹಿಂದೆ ಉಡುಪಿ ನಗರದ ವಿವಿಧ ಭಾಗದ ಸಾರ್ವಜನಿಕರು ನದಿಗೆ ಎಸೆಯುತ್ತಿದ್ದ ತ್ಯಾಜ್ಯಗಳಾದ ಪ್ಲಾಸ್ಟಿಕ್ ಬಾಟಲ್,ಥರ್ಮಕೋಲ್, ಪ್ಲಾಸ್ಟಿಕ್ ಕವರ್ ಮುಂತಾದವುಗಳು ನೇರವಾಗಿ ಸಮುದ್ರ ಸೇರುತ್ತಿತ್ತು.ಇದರಿಂದ ಮಾಲಿನ್ಯದ ತೀವ್ರತೆ ಕೂಡ ಹೆಚ್ಚಾಗುತ್ತಿತ್ತು.ಅದನ್ನು ತಡೆಗಟ್ಟಲು ಪ್ರಾಯೋಗಿಕವಾಗಿ ನವೆಂಬರ್ 2021ರಲ್ಲಿ ತಂದ ಯೋಜನೆಯೇ ಈ ಫ್ಲೋಟಿಂಗ್ ಟ್ರ್ಯಾಶ್ ಬ್ಯಾರಿಯರ್.
ಈ ಕುರಿತು ದಾಯ್ಜಿವಲ್ಡ್ ನೊಂದಿಗೆ ಮಾತನಾಡಿದ ಉಡುಪಿ ನಗರಸಭೆ ಪರಿಸರ ಇಂಜಿನಿಯರ್ ಸ್ನೇಹ ಮಾತನಾಡಿ, “ಫ್ಲೋಟಿಂಗ್ ಟ್ರ್ಯಾಶ್ ಬ್ಯಾರಿಯರ್ ನ್ನು 3.5ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ಲಾಸ್ಟಿಕ್ ಕವರ್,ಥರ್ಮಕೋಲ್,ಪ್ಲಾಸ್ಟಿಕ್ ಬಾಟಲ್ ನ್ನು ನದಿಯಲ್ಲಿ ಎಸೆಯುವುದರಿಂದ, ನೇರವಾಗಿ ಸಮುದ್ರಕ್ಕೆ ಹೋಗುತ್ತಿತ್ತು.ಅದನ್ನು ತಡೆಗಟ್ಟುವ ಸಲುವಾಗಿ ಟ್ರ್ಯಾಶ್ ಬ್ಯಾರಿಯರ್ ನ್ನು ಸ್ಥಾಪಿಸಲಾಯಿತು.ಈ ಫ್ಲೋಟಿಂಗ್ ಟ್ರ್ಯಾಶ್ ಬ್ಯಾರಿಯರ್ ಗೆ ಸಿಲುಕುವ ತ್ಯಾಜ್ಯಗಳು ಮುಂದೆ ಹೋಗಲು ಆಗದೆ, ಅಲ್ಲಿಯೇ ಸಂಗ್ರಹವಾಗುತ್ತದೆ.ಹೀಗೆ ಸಂಗ್ರವಾದ ವಸ್ತುಗಳನ್ನು ವಾರಕ್ಕೆ ಎರಡು ಬಾರಿ ತೆಗೆದು,ಮರುಬಳಕೆ ಮಾಡುವ ವಸ್ತುಗಳನ್ನು ಅಧಿಕೃತ ಮರುಬಳಕೆದಾರರಿಗೆ ಕೊಡುತ್ತೇವೆ.ಇಲ್ಲವಾದರೆ, ಲ್ಯಾಂಡ್ ಫಿಲ್ಲಿಂಗ್ ಗೆ ಕಳಿಸಿಕೊಡುತ್ತೇವೆ. ಒಂದು ಬಾರಿ ಕಸ ತೆಗೆದಾಗ ಒಂದುವರೆ ಟನ್ ನಿಂದ ಎರಡು ಟನ್ ಕಸಗಳು ಸಂಗ್ರಹವಾಗುತ್ತದೆ” ಎಂದು ಮಾಹಿತಿ ನೀಡಿದರು.
ರಾಷ್ಟ್ರೀಯ ಹಸಿರು ಪೀಠ ನಿರ್ದೇಶನವು ಸರಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕೆರೆ,ಸಮುದ್ರ ನದಿ ಮೂಲಗಳ ಸಂರಕ್ಷಣೆಗೆ ಈ ರೀತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮಾರ್ಗಸೂಚಿಯನ್ನು ಹೊರಡಿಸಿದೆ.ಅದರಂತೆ ಪ್ರಾಯೋಗಿಕವಾಗಿ ಉಡುಪಿ ನಗರ ಸಭೆಯು 2021ರಲ್ಲಿ ಫ್ಲೋಟಿಂಗ್ ಟ್ರ್ಯಾಶ್ ಬ್ಯಾರಿಯರ್ ನ್ನು ಅಳವಡಿಸಿ, ಯಶಸ್ವಿಯಾಗಿದೆ.ಇನ್ನೂ ಕೆಲವು ಕಡೆಗಳಲ್ಲಿ ಸಣ್ಣ ಮಾದರಿಯಲ್ಲಿ ಈ ಫ್ಲೋಟಿಂಗ್ ಟ್ರ್ಯಾಶ್ ಬ್ಯಾರಿಯರ್ ನ್ನು ಅಳವಡಿಸುವ ಚಿಂತನೆ ನಗರಸಭೆಗೆ ಇದೆ.
ಈ ಫ್ಲೋಟಿಂಗ್ ಟ್ರ್ಯಾಶ್ ಬ್ಯಾರಿಯರ್ ನ್ನು ಅಳವಡಿಸದೇ ಇದ್ದಲ್ಲಿ ದೊಡ್ಡ ಪ್ರಮಾಣದ ತ್ಯಾಜ್ಯಗಳು ಸಮುದ್ರಕ್ಕೆ ಸೇರಿ ಜಲಚರ ಜೀವಿಗಳಿಗೆ,ಪರಿಸರದ ಅಳಿವಿಗೆ ಕಾರಣವಾಗುವ ಸಂದರ್ಭವನ್ನು ಉಡುಪಿ ನಗರಸಭೆ ಯಶಸ್ವಿಯಾಗಿ ಮೆಟ್ಟಿ ನಿಂತಿದೆ.