ಸುಳ್ಯ, ಜು 14 (DaijiworldNews/MS): ತಮ್ಮಂದಿರು ಸೇರಿ ಅಣ್ಣನನ್ನು ಇರಿದು ಕೊಲೆಗೈದ ಘಟನೆ ಭೀಕರ ಘಟನೆ ಸುಳ್ಯ ಸಂಪಾಜೆಯ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ.
ಆಸ್ತಿ ವಿವಾದ ಹಿನ್ನಲೆಯಲ್ಲಿ ಈ ಹತ್ಯೆ ನಡೆದಿದ್ದು ಇಲ್ಲಿನ ಕುದ್ರೆಪಾಯ ನಿವಾಸಿ ಉಸ್ಮಾನ್ ಹತ್ಯೆಯಾದ ದುರ್ದೈವಿ.
ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವಿತ್ತು. ಶುಕ್ರವಾರ ಇವರು ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಜಾಗಕ್ಕೆ ಹೋಗಿದ್ದರು. ಈ ವೇಳೆ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ತೀವ್ರ ಚರ್ಚೆ ನಡೆದು ಕೋಪದ ತೀವ್ರತೆಯಲ್ಲಿ ಸಹೋದರರು ಸೇರಿ ಚೂರಿಯಿಂದ ಇರಿದು ಉಸ್ಮಾನ್ ನನ್ನು ಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ.
ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ ಇವರಿಗೆ ಜಾಗವಿದೆ ಎಂದು ತಿಳಿದು ಬಂದಿದೆ. ಸದ್ಯ ಇವರು ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದರು ಎನ್ನಲಾಗುತ್ತಿದೆ. ಸಂಪಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.