ಮಂಗಳೂರು, ಜು 14 (DaijiworldNews/MS): ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಇಂದು ನಾಲ್ವರು ಹಿರಿಯ ಸಾಹಿತಿಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಪುರಸ್ಕರಿಸಲಾಯಿತು.
ದ.ಕ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಎಂಪಿ ಶ್ರೀನಾಥ ಅವರ ನೇತೃತ್ವದ ತಂಡ ಗುರುವಾರ ಮಂಗಳೂರು ಪರಿಸರದ ಹಿರಿಯ ಸಾಹಿತಿಗಳಾದ ಪ್ರೊ. ಕೆ. ಟಿ ಗಟ್ಟಿ, ಡಾ. ವಾಮನ ನಂದಾವರ, ಸದಾನಂದ ಸುವರ್ಣ, ಕೇಶವ ಕುಡ್ಲ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿತು. ಜಿಲ್ಲಾ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ಕಿರಣಪ್ರಸಾದ್ ರೈ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮಂಜುನಾಥ್ ರೇವಣ್ಕರ್,ಎಂಪಿ ಸಾಕೇತ್ ರಾವ್ ಮುಂತಾದವರು ಜಿಲ್ಲಾ ಕಸಾಪ ತಂಡದಲ್ಲಿದ್ದರು.
ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಸಹಕಾರ- ಸಹಯೋಗ ಪಡೆಯುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕೂಡ ಇಂದು ಭೇಟಿ ಮಾಡಲಾಯಿತು. ಸಾಹಿತ್ಯ ಪರಿಷತ್ನ ಪದನಿಮಿತ್ತ ಸದಸ್ಯರಾಗಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಕೆ ಕೃಷ್ಣ, ಭೇಟಿ ಮಾಡಲಾಯಿತು.
ಕಾದಂಬರಿಕಾರ ಕೆ.ಟಿ ಗಟ್ಟಿ ಅವರು, ಸಾಹಿತ್ಯದ ವಿಚಾರಗಳನ್ನು ಚರ್ಚಿಸಿದರು. ಸಾಹಿತ್ಯಲೋಕದ ಇತ್ತೀಚಿನ ಬೆಳವಣಿಗೆಗಳನ್ನು ಕೇಳಿ ತಿಳಿದುಕೊಂಡರು. ಹಿರಿಯ ಸಾಹಿತಿ ಕೇಶವ ಕುಡ್ಲ ಅವರ ಮನೆಗೆ ತೆರಳಿದ ಜಿಲ್ಲಾ ಕಸಾಪ ಅಧ್ಯಕ್ಷರ ತಂಡ ಯೋಗಕ್ಷೇಮ ವಿಚಾರಿಸಿದರು. ಕೆಶವ ಕುಡ್ಲ ಅವರು ತಮ್ಮ ಸಾಹಿತ್ಯದ ಅನುಭವಗಳ ನ್ನು ಹಂಚಿಕೊಂಡರು.
ತಮ್ಮನ್ನು ಭೇಟಿ ಮಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಡಾ. ವಾಮನ ನಂದಾವರ ಮತ್ತು ಪ್ರೊ. ಚಂದ್ರಕಲಾ ನಂದಾವರ ದಂಪತಿಗಳನ್ನೂ ಭೇಟಿ ಮಾಡಿ ಕುಶಲ ವಿಚಾರಿಸಲಾಯಿತು. ಹಿರಿಯ ರಂಗಕರ್ಮಿ, ಚಿತ್ರ ನಿರ್ದೇಶಕ ಸದಾನಂದ ಸುವರ್ಣ ಅವರು ಬದುಕಿನ ಸುಂದರ ಕ್ಷಣಗಳನ್ನು ಮೆಲುಕು ಹಾಕಿ ನಾಟಕದ ಆ ದಿನಗಳ ನ್ನು ನೆನಪಿಸಿ ಕೊಂಡರು .ಡಾ.ಎಂ.ಪಿ ಶ್ರೀನಾಥ ಅವರು ಹಾರ-ಶಾಲು ತೊಡಿಸಿ ಗೌರವ ಸಲ್ಲಿಸಿದರು.
ನಾಲ್ವರೂ ಹಿರಿಯರು ತಮ್ಮನ್ನು ಭೇಟಿ ಮಾಡಲು ಬಂದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶ್ರೀನಾಥ ಅವರ ತಂಡದ ಜತೆ ಮನಬಿಚ್ಚಿ ಮಾತನಾಡಿ ಬದುಕಿನ ಸಿಹಿ-ಕಹಿಗಳನ್ನು ಹಂಚಿಕೊಂಡರು.